ಮನೆ ದೇಶ ದತ್ತು ಪ್ರಕ್ರಿಯೆಯನ್ನು ಸರಳಗೊಳಿಸುವ ಅಗತ್ಯವಿದೆ: ಸುಪ್ರೀಂ ಕೋರ್ಟ್‌

ದತ್ತು ಪ್ರಕ್ರಿಯೆಯನ್ನು ಸರಳಗೊಳಿಸುವ ಅಗತ್ಯವಿದೆ: ಸುಪ್ರೀಂ ಕೋರ್ಟ್‌

0

ನವದೆಹಲಿ (New Delhi): ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸರಳಗೊಳಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಭಾರತದಲ್ಲಿ ಒಂದು ಮಗುವನ್ನು ದತ್ತು ತೆಗೆದುಕೊಳ್ಳಲು 3–4 ವರ್ಷಗಳು ಬೇಕಾಗುತ್ತವೆ. ಹೀಗಾಗಿ, ಈ ಪ್ರಕ್ರಿಯೆಯನ್ನು ಸರಳಗೊಳಿಸುವುದು ಅಗತ್ಯ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎ.ಎಸ್‌.ಬೋಪಣ್ಣ ಹಾಗೂ ಜೆ.ಬಿ.ಪರ್ದೀವಾಲಾ ಅವರಿದ್ದ ನ್ಯಾಯಪೀಠ ಪ್ರತಿಪಾದಿಸಿದೆ.

ಮಕ್ಕಳ ದತ್ತು ಪಡೆಯುವ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಎನ್‌ಜಿಒ ‘ದಿ ಟೆಂಪಲ್‌ ಆಫ್‌ ಹೀಲಿಂಗ್‌’ನೊಂದಿಗೆ ಕೇಂದ್ರದ ಮಕ್ಕಳ ಕಲ್ಯಾಣ ಸಚಿವಾಲಯದ ಅಧಿಕಾರಿಯೊಬ್ಬರು ಸಭೆ ನಡೆಸಿ, ವಿಸ್ತೃತ ವರದಿಯೊಂದನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್‌ ಕೆ.ಎಂ.ನಟರಾಜ್ ಅವರಿಗೆ ನ್ಯಾಯಪೀಠ ಸೂಚಿಸಿದೆ.

ಲಕ್ಷಾಂತರ ಮಕ್ಕಳು ತಮ್ಮನ್ನು ದತ್ತು ಪಡೆಯುವವರಿಗಾಗಿ ಕಾಯುತ್ತಿದ್ದಾರೆ. ದತ್ತು ಪಡೆಯುವ ಸಲುವಾಗಿ ಕಾಯುತ್ತಿರುವ ದಂಪತಿ ಸಂಖ್ಯೆಯೂ ದೊಡ್ಡದಿದೆ. ಆದರೆ, ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದ (ಸಿಎಆರ್‌ಎ) ಮೂಲಕ ದತ್ತು ಪ್ರಕ್ರಿಯೆ ಪೂರ್ಣಗೊಳ್ಳಲು 3–4 ವರ್ಷ ಬೇಕಾಗುತ್ತದೆ. ಇದು ಸಂಕೀರ್ಣ ಪ್ರಕ್ರಿಯೆಯಾಗಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಸರ್ಕಾರಕ್ಕೆ ಈ ಸಮಸ್ಯೆಯ ಅರಿವಿದೆ. ಪ್ರತಿಕ್ರಿಯೆ ನೀಡಲು ಆರು ವಾರಗಳ ಸಮಯ ನೀಡಬೇಕು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್‌ ಕೆ.ಎಂ.ನಟರಾಜ್ ಅವರು ನ್ಯಾಯಪೀಠಕ್ಕೆ ತಿಳಿಸಿದರು.

ದತ್ತು ಪ್ರಕ್ರಿಯೆ ಸರಳಗೊಳಿಸುವ ಕುರಿತಾದ ಸಲಹೆಗಳನ್ನು ನಟರಾಜ್‌ ಅವರಿಗೆ ನೀಡುವಂತೆ ‘ದಿ ಟೆಂಪಲ್‌ ಆಫ್‌ ಹೀಲಿಂಗ್‌’ನ ಕಾರ್ಯದರ್ಶಿ ಪೀಯೂಷ್ ಸಕ್ಸೇನಾ ಅವರಿಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಅಕ್ಟೋಬರ್‌ಗೆ ಮುಂದೂಡಿತು.