ಚಿಕ್ಕಬಳ್ಳಾಪುರ : ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೆಬ್ಬರಿ ಗ್ರಾಮದಲ್ಲಿ ಆಫ್ರಿಕನ್ ಹಂದಿ ಜ್ವರ ಪ್ರಕರಣಗಳು ಪತ್ತೆಯಾಗಿದ್ದು, 57 ಹಂದಿಗಳನ್ನು ಕೊಲ್ಲಲು ಮುಂದಾದ ಪಶು ಇಲಾಖೆ ಎಂದು ಹೇಳಲಾಗಿದೆ.
ಹೆಬ್ಬರಿ ಗ್ರಾಮದ ವೆಂಕಟರೆಡ್ಡಿ ಎಂಬುವವರ ಹಂದಿ ಫಾರಂನಲ್ಲಿ ಈ ಮಾರಕ ವೈರಸ್ ಪತ್ತೆಯಾಗಿದೆ. ಕಳೆದೊಂದು ವಾರದಿಂದ ಫಾರಂ ನಲ್ಲಿನ ಹಲವು ಹಂದಿಗಳು ಧಿಡೀರ್ ಅಂತ ಸಾವನ್ನಪ್ಪುತ್ತಿದ್ದು. ಇದರಿಂದ ಆತಂಕಗೊಂಡ ಮಾಲೀಕ ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಬಳಿಕ ಪಶುಪಾಲನಾ ಇಲಾಖೆ ಅಧಿಕಾರಿಗಳು ಸತ್ತ ಹಂದಿಗಳ ಮಾದರಿಗಳನ್ನ ಲ್ಯಾಬ್‌ನಲ್ಲಿ ಪರೀಕ್ಷಿಸಿದ್ದರು. ಪರೀಕ್ಷೆ ವೇಳೆ ಹಂದಿ ಜ್ವರ ಇರೋದು ದೃಢವಾಗಿದೆ. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹಾಗೂ ಪಶುಪಾಲನಾ ಇಲಾಖೆ ಹೈಅಲರ್ಟ್ ಆಗಿದ್ದು ಹಂದಿ ಜ್ವರ ಕಡಿವಾಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳೋಕೆ ಮುಂದಾಗಿದೆ. ಫಾರಂ ನಲ್ಲಿ ಉಳಿದ ಹಂದಿಗಳನ್ನು ಕೊಲ್ಲೋಕೆ ತೀರ್ಮಾನಿಸಲಾಗಿದೆ.
ಆಫ್ರಿಕನ್ ಹಂದಿ ಜ್ವರವು ASFV ಎಂಬ ವೈರಸ್‌ನಿಂದ ಹರಡುತ್ತೆ. ಆಫ್ರಿಕನ್ ಹಂದಿ ಜ್ವರ ಎಂಬುದು ವೈರಸ್‌ನಿಂದ ಹಂದಿಗಳಲ್ಲಿ ಉಂಟಾಗುವ ಸಾಂಕ್ರಾಮಿಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದ್ದು, 100% ವರೆಗೆ ಮರಣ ಪ್ರಮಾಣ ಹೊಂದಿದೆ ಎಂದು ತಜ್ಞರು ಹೇಳುತ್ತಾರೆ. ಆದ್ರೆ ಇದು ಮಾನವರಿಗೆ ಹರಡುವುದಿಲ್ಲ. ಈ ರೋಗವು ಹಂದಿ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದೆ ಹಾಗೂ ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತದೆ ಎಂದು ತಿಳಿದು ಬಂದಿದೆ.














