ಚಾಮರಾಜನಗರ(Chamarajanagara): ಐದು ವರ್ಷಗಳ ಬಳಿಕ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಚಾಮರಾಜೇಶ್ವರ ರಥೋತ್ಸವ ಅದ್ಧೂರಿಯಾಗಿ ನಡೆಯಿತು.
ಕಿಡಿಗೇಡಿಯೊಬ್ಬ ರಥಕ್ಕೆ ಬೆಂಕಿ ಇಟ್ಟ ಕಾರಣಕ್ಕಾಗಿ ಜಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ವರ್ಷ 1 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ರಥ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಜೊತೆಗೆ ಕೊರೊನಾ ಆತಂಕ ಇಲ್ಲದ್ದರಿಂದ ಚಾಮರಾಜೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಶ್ರೀ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರಸ್ವಾಮಿಯವರ ವಿಶೇಷ ಜಾತ್ರಾ ರಥೋತ್ಸವಕ್ಕೆ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. 11 ರಿಂದ 11.30 ಗಂಟೆಯ ಶುಭ ಕನ್ಯಾ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆತು ದೇವಸ್ಥಾನದ ಮುಂಭಾಗದಿಂದ ದಕ್ಷಿಣಾಭಿಮುಖವಾಗಿ ಚಲಿಸಿ ಎಸ್.ಬಿ.ಎಂ. ರಸ್ತೆಯಲ್ಲಿ ಸಾಗಿ ವೀರಭದ್ರೇಶ್ವರಸ್ವಾಮಿ ದೇವಾಲಯದ ವೃತ್ತದಿಂದ ಮಾರಮ್ಮ ದೇವಸ್ಥಾನದ ರಸ್ತೆಯ ಮೂಲಕ ಹಳೆ ತರಕಾರಿ ಮಾರುಕಟ್ಟೆ ರಸ್ತೆಯಲ್ಲಿ ಹಾದು ದೇವಸ್ಥಾನದ ಮೂಲಸ್ಥಾನ ತಲುಪಿತು.
ಏಕೈಕ ಆಷಾಢದ ಜಾತ್ರೆ : ಆಷಾಢ ಮಾಸದಲ್ಲಿ ನಡೆಯುವ ರಾಜ್ಯದ ಏಕೈಕ ರಥೋತ್ಸವ ಇದಾಗಿದ್ದು, ನೂತನ ದಂಪತಿಗಳ ಜಾತ್ರೆ ಎಂದೇ ಇದು ಹೆಸರುವಾಸಿಯಾಗಿದೆ. ಹೊಸದಾಗಿ ಮದುವೆಯಾದ ಗಂಡ-ಹೆಂಡತಿ ಅಷಾಢ ಮಾಸದ ಜಾತ್ರೆಯಲ್ಲಿ ಒಂದಾಗಿ ಹಣ್ಣು ಜವನ ಎಸೆಯುತ್ತಾರೆ. ಹೊಸದಾಗಿ ಮದುವೆಯಾದ ಹುಡುಗಿ ಅಷಾಢ ಮಾಸದಲ್ಲಿ ತವರಿಗೆ ಹೋಗುವುದರಿಂದ ಈ ಜಾತ್ರೆ ನೆಪದಲ್ಲಿ ಸತಿಪತಿಗಳು ಒಂದಾಗಿ ಹಣ್ಣು ಜವನ ಎಸೆಯುವುದು ಈ ಜಾತ್ರೆಯ ವಿಶೇಷತೆ. ರಾಜತ್ವ ಮತ್ತು ದೈವತ್ವ ಇರುವ ವಿಶೇಷ ದೇಗುಲ ಇದಾಗಿದೆ. ರಥೋತ್ಸವ ದಿನದಿಂದು ಹಣ್ಣು-ಜವನ ಎಸೆದರೆ ಸಂತಾನ ಭಾಗ್ಯ, ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ ಎಂದು ಅರ್ಚಕರಾದ ಸೂರ್ಯನಾರಾಯಣರಾವ್ ಹೇಳುತ್ತಾರೆ.
ರಥೋತ್ಸವಕ್ಕೆ ನಿಮಿತ್ತ ಚಾಮರಾಜನಗರ ಪೊಲೀಸರು ಭಾರೀ ಭದ್ರತೆಯನ್ನು ಕೈಗೊಂಡಿದ್ದರು. ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು ಹನುಮಾನ್ ಧ್ಬಜ ಮತ್ತು ನಟ ಪುನೀತ್ ರಾಜ್ ಕುಮಾರ್ ಚಿತ್ರವಿದ್ದ ಕನ್ನಡ ಬಾವುಟವನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು.