ಮನೆ ರಾಜ್ಯ ಬೆಳಗಾವಿ ವಿಭಜನೆ ಕುರಿತು ಸಂಪುಟದಲ್ಲಿ ಚರ್ಚಿಸಿ ನಿರ್ಧಾರ: ಮುಖ್ಯಮಂತ್ರಿ ಬೊಮ್ಮಾಯಿ

ಬೆಳಗಾವಿ ವಿಭಜನೆ ಕುರಿತು ಸಂಪುಟದಲ್ಲಿ ಚರ್ಚಿಸಿ ನಿರ್ಧಾರ: ಮುಖ್ಯಮಂತ್ರಿ ಬೊಮ್ಮಾಯಿ

0

ಬೆಳಗಾವಿ (Belagavi)- ಬೆಳಗಾವಿ ಜಿಲ್ಲೆಯ ವಿಭಜನೆಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ (Chief Minister) ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಮತ್ತು ಬೆಳಗಾವಿ ಜಿಲ್ಲೆಯ ಹಿತರಕ್ಷಣೆಗೆ ಅಗತ್ಯವಿರುವ ಕ್ರಮ ಕೈಗೊಳ್ಳಲಾಗುವುದು. ಅದರ ಜತೆ ಜಿಲ್ಲೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಬೆಳಗಾವಿ ಜಿಲ್ಲೆಯ ವಿಭಜನೆಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಳಗಾವಿ ಜಿಲ್ಲೆಯ ವಿಭಜನೆಗೆ ಹಲವಾರು ವರ್ಷಗಳಿಂದ ಬೇಡಿಕೆ ಇದೆ. ಬೇರೆ ಎಲ್ಲಾ ಜಿಲ್ಲೆಗಳು ಆದಾಗಲೂ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು ಎನ್ನುವ ಬೇಡಿಕೆ ಬಂದಿತ್ತು. ಅವತ್ತಿನ ಸಂದರ್ಭದಲ್ಲಿ ಜೆಎಚ್ ಪಟೇಲರು ಮುಖ್ಯಮಂತ್ರಿಗಳಾಗಿದ್ದಾಗಲೂ ಚರ್ಚೆಯಾಗಿತ್ತು. ಬೆಳಗಾವಿ ಗಡಿ ಜಿಲ್ಲೆಯಾದ್ದರಿಂದ ಸದ್ಯಕ್ಕೆ ಬೇಡ ಎಂಬ ನಿರ್ಧಾರ ಮಾಡಲಾಗಿತ್ತು. ಈಗ ಮತ್ತೆ ಜನರು ಅದರ ಬಗ್ಗೆ ಒತ್ತಾಸೆ ವ್ಯಕ್ತಪಡಿಸುತ್ತಿದ್ದಾರೆ. ಅವನ್ನೆಲ್ಲಾ ಗಮನಿಸಿ ಜಿಲ್ಲೆಯ ಹಿತದೃಷ್ಟಿಯಿಂದ ಏನು ಬೇಕೋ ಅದನ್ನು ಮಾಡಲಾಗುವುದು. ಗಡಿ, ಭಾಷಾ ಸಮಸ್ಯೆ ಕಾರಣದಿಂದ ವಿಭಜನೆ ಮಾಡದೆ ಅಖಂಡ ಜಿಲ್ಲೆಯಾಗಿ ಉಳಿಸಿಕೊಂಡು ಬರಲಾಗಿದೆ. ರಾಜ್ಯದ ಹಿತದೃಷ್ಟಿಯಿಂದ ವಿಭಜನೆ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿಯೇ ಅತಿದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯ ವಿಭಜನೆಗೆ ದಶಕಗಳಿಂದಲೂ ಆಗ್ರಹ ಕೇಳಿಬರುತ್ತಿದೆ. ಬೆಳಗಾವಿಯನ್ನು ಬೆಳಗಾವಿ, ಗೋಕಾಕ್‌ ಹಾಗೂ ಚಿಕ್ಕೋಡಿ ಜಿಲ್ಲೆಗಳಾಗಿ ವಿಭಜಿಸಬೇಕು ಎಂಬ ಬೇಡಿಕೆ ಇದೆ. ಈಗಾಗಲೇ ಚಿಕ್ಕೋಡಿಗೆ ಶೈಕ್ಷಣಿಕ ಜಿಲ್ಲೆಯ ಸ್ಥಾನಮಾನ ಸಿಕ್ಕಿದೆ. ಒಟ್ಟು 17 ವಿಧಾನಸಭಾ ಕ್ಷೇತ್ರಗಳು ಎರಡು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ ವಿಭಜನೆಯಾದರೆ ಸೂಕ್ತ ಎಂಬುದು ಇಲ್ಲಿನ ಜನರ ಅಭಿಪ್ರಾಯ.

ಸದ್ಯ ಸಚಿವ ಸಂಪುಟ ವಿಸ್ತರಣೆ ಚರ್ಚೆ ಇಲ್ಲ!
ಹೈಕಮಾಂಡ್ ಕರೆದಾಗ ಸಚಿವ ಸಂಪುಟ ವಿಷಯವಾಗಿ ಚರ್ಚಿಸುತ್ತೇನೆ. ಸದ್ಯ ಸಚಿವ ಸಂಪುಟ ವಿಸ್ತರಣೆ ಚರ್ಚೆಯಲ್ಲಿ ಇಲ್ಲ. ಶುಕ್ರವಾರ ನ್ಯಾಯಾಧೀಶರ ಸಮಾವೇಶ ಹಿನ್ನಲೆಯಲ್ಲಿ ದೆಹಲಿಗೆ ತೆರಳುತ್ತಿದ್ದೇನೆ. ಸಚಿವ ಸಂಪುಟ ವಿಸ್ತರಣೆ ಕುರಿತು ಹೈ ಕಮಾಂಡ್ ಯಾವಾಗ ಕರೆಯುತ್ತಾರೊ ಆಗ ದೆಹಲಿಗೆ ಹೋಗಿ ಚರ್ಚಿಸಿ ಬರುತ್ತೇನೆ ಎಂದು ಹೇಳಿದರು.