ನವದೆಹಲಿ: ಜಿ20 ಶೃಂಗಸಭೆಯ ಅತಿಥಿಗಳಿಗೆ ರಾಷ್ಟ್ರಪತಿ ಭವನದಿಂದ ಕಳುಹಿಸಲಾದ ಆಮಂತ್ರಣ ಪತ್ರಿಕೆಯಲ್ಲಿದ್ದ ಪ್ರೆಸಿಡೆಂಟ್ ಆಫ್ ಭಾರತ್ ಎಂಬ ಬರಹ ಬಹುದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತ್ತು, ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಇಂಡೋನೇಷ್ಯಾ ಪ್ರವಾಸದ ದಾಖಲೆಯಲ್ಲಿ ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ಎಂದು ಬರೆಯಲಾದ ಪೋಸ್ಟ್ ವೊಂದನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹಂಚಿಕೊಂಡಿದ್ದಾರೆ.
ಅವರು ಹಂಚಿಕೊಂಡಿರುವ ಮಾಹಿತಿಯಲ್ಲಿ ಮೋದಿ ಅವರನ್ನು “ಭಾರತದ ಪ್ರಧಾನಿ” ಎಂದು ಉಲ್ಲೇಖಿಸಲಾಗಿದೆ. ಇದಲ್ಲದೆ, ಆಗಸ್ಟ್ 22-25 ರಂದು ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್ ಗೆ ಅವರ ಇತ್ತೀಚಿನ ಭೇಟಿಯ ಸಂದರ್ಭದಲ್ಲಿ ಸಮಾರಂಭದ ಪತ್ರಗಳಲ್ಲಿ ಮೋದಿ ಅವರನ್ನು ‘ಭಾರತದ ಪ್ರಧಾನ ಮಂತ್ರಿ’ ಎಂದು ಉಲ್ಲೇಖಿಸಲಾಗಿತ್ತು.
ಸರ್ಕಾರದ ಎಲ್ಲಾ ವೆಬ್ ಸೈಟ್ ಗಳು, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ನಲ್ಲಿ ಈ ಬಗ್ಗೆ ಯಾವುದೇ ಸುದ್ದಿ ಇಲ್ಲ ಅಥವಾ ಅಧಿಕೃತ ಸಾಮಾಜಿಕ ಹ್ಯಾಂಡಲ್‌ಗಳಲ್ಲಿ ಅಂತಹ ಯಾವುದೇ ಪೋಸ್ಟ್ ಕಂಡುಬಂದಿಲ್ಲ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಮಂಗಳವಾರ ಸಂಜೆ ಈ ಸಂಬಂಧ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
20ನೇ ಆಸಿಯಾನ್-ಭಾರತ ಶೃಂಗಸಭೆ ಮತ್ತು 18ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಬುಧವಾರ ರಾತ್ರಿ ಇಂಡೋನೇಷ್ಯಾಕ್ಕೆ ತೆರಳಲಿದ್ದಾರೆ.
ರಾಷ್ಟ್ರಪತಿ ಭವನದಿಂದ ಸೆಪ್ಟೆಂಬರ್ 9ರಂದು ಕಳುಹಿಸಲಾದ ಜಿ20 ಔತಣಕೂಟದ ಆಹ್ವಾನದಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಪ್ರೆಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಲಾಗಿತ್ತು.
ಬಿಜೆಪಿ ರಾಜ್ಯಸಭಾ ಸಂಸದ ಹರನಾಥ್ ಸಿಂಗ್ ಯಾದವ್ ಕೂಡ ಈ ವಿಚಾರ ಕುರಿತು ಮಾತನಾಡಿ ಇಂಡಿಯಾ ಬದಲಿಗೆ ಭಾರತ ಪದವನ್ನು ಬಳಸಬೇಕೆಂದು ಇಡೀ ದೇಶ ಒತ್ತಾಯಿಸುತ್ತಿದೆ ಎಂದು ಹೇಳಿದ್ದಾರೆ.














