ಮನೆ ರಾಷ್ಟ್ರೀಯ ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಯತ್ನ – ವಕೀಲನ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ...

ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಯತ್ನ – ವಕೀಲನ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಎಜಿ ಒಪ್ಪಿಗೆ..!

0

ನವದೆಹಲಿ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ (71) ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಒಪ್ಪಿಗೆ ನೀಡಿದ್ದಾರೆ.

ವಕೀಲ ರಾಕೇಶ್ ಕಿಶೋರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ​​ಮುಖ್ಯಸ್ಥ, ಹಿರಿಯ ವಕೀಲ ವಿಕಾಸ್ ಸಿಂಗ್, ನ್ಯಾ. ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ದೀಪಾವಳಿ ರಜೆಯ ನಂತರ ಪ್ರಕರಣದ ವಿಚಾರಣೆ ನಡೆಸಲಾಗುವುದು ನ್ಯಾಯಾಲಯ ಭರವಸೆ ನೀಡಿದೆ.

ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದ್ದ ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಕೋಲಾಹಲ ಸೃಷ್ಟಿಸಿತ್ತು. ಈ ಬಗ್ಗೆ ಹಿರಿಯ ವಕೀಲ ವಿಕಾಸ್ ಸಿಂಗ್ ಪ್ರತಿಕ್ರಿಯಿಸಿ ಸಾಂಸ್ಥಿಕ ಸಮಗ್ರತೆ ಮತ್ತು ನ್ಯಾಯಾಲಯದ ಘನತೆಯನ್ನು ದುರ್ಬಲಗೊಳಿಸುವ ಯತ್ನ ಎಂದಿದ್ದರು.

ಅ.6 ರಂದು ವಕೀಲ ರಾಕೇಶ್ ಕಿಶೋರ್ ನ್ಯಾಯಾಲಯದಲ್ಲೇ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಪ್ರಯತ್ನಿಸಿದ್ದರು. ಭದ್ರತಾ ಸಿಬ್ಬಂದಿ ತಕ್ಷಣ ವಕೀಲರನ್ನು ವಶಕ್ಕೆ ಪಡೆದು, ಅಲ್ಲಿಂದ ಕರೆದೊಯ್ದಿದ್ದರು. ಈ ಗದ್ದಲದ ನಡುವೆಯೂ ಸಿಜೆಐ ಶಾಂತವಾಗಿ, ವಿಚಾರಣೆಯನ್ನು ಮುಂದುವರೆಸಿದ್ದರು.

ಈ ಘಟನೆಯನ್ನು ಮುಖ್ಯ ನ್ಯಾಯಮೂರ್ತಿಗಳು ಮರೆತುಹೋದ ಅಧ್ಯಾಯ ಎಂದು ಕರೆದಿದ್ದರು. ಇನ್ನೂ ಬಾರ್ ಕೌನ್ಸಿಲ್ ಆಫ್ ಇಂಡಿಯಾ ತಕ್ಷಣದಿಂದ ಜಾರಿಗೆ ಬರುವಂತೆ ರಾಕೇಶ್ ಕಿಶೋರ್ ಪರವಾನಗಿಯನ್ನು ಅಮಾನತುಗೊಳಿಸಿತ್ತು. ವಕೀಲನ ಕೃತ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಸಹ ತೀವ್ರವಾಗಿ ಖಂಡಿಸಿದ್ದರು.