ಮನೆ ರಾಜ್ಯ ಮೈಷುಗರ್ ಬಾಯ್ಲರ್‌ಗೆ ಅಗ್ನಿ ಸ್ಪರ್ಶ:ಸಕ್ಕರೆ ಕಾರ್ಖಾನೆಗೆ ಸಾಂಕೇತಿಕ ಚಾಲನೆ

ಮೈಷುಗರ್ ಬಾಯ್ಲರ್‌ಗೆ ಅಗ್ನಿ ಸ್ಪರ್ಶ:ಸಕ್ಕರೆ ಕಾರ್ಖಾನೆಗೆ ಸಾಂಕೇತಿಕ ಚಾಲನೆ

0

ಮಂಡ್ಯ:ಮೈಷುಗರ್ ಬಾಯ್ಲರ್‌ಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಸಾಂಕೇತಿಕವಾಗಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಚಾಲನೆ ನೀಡಿದರು.

Join Our Whatsapp Group


ಕಾರ್ಖಾನೆಯಲ್ಲಿ ಗಣಪತಿ ಹೋಮ ಪೂಜೆಯಲ್ಲಿ ಪಾಲ್ಗೊಂಡ ಬಳಿಕ ಬಾಯ್ಲರ್‌ ಗೆ ಅಗ್ನಿ ಸ್ಪರ್ಶ ಮಾಡುವುದರೊಂದಿಗೆ ಕಾರ್ಖಾನೆಗೆ ಚಾಲನೆ ನೀಡಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾರ್ಖಾನೆ ಪ್ರತಿ ನಿತ್ಯ 3 ಸಾವಿರದಿಂದ 4 ಸಾವಿರ ಟನ್ ಕಬ್ಬು ಅರೆಯದಿದ್ದರೆ ಎಂದಿಗೂ ಕಾರ್ಖಾನೆಯನ್ನು ಪುನಶ್ಚೇತನ ಮಾಡಲು ಸಾಧ್ಯವಿಲ್ಲ.ಆ ನಿಟ್ಟಿನಲ್ಲಿ ಕಾರ್ಖಾನೆಯನ್ನು ಕಬ್ಬು ಅರೆಯುವುದಕ್ಕೆ ಸಜ್ಜುಗೊಳಿ
ಸಲಾಗಿದೆ ಎಂದರು.
ಈಗಾಗಲೇ 5.03 ಲಕ್ಷ ಟನ್ ಕಬ್ಬನ್ನು ಒಪ್ಪಿಗೆ ಮಾಡಿಕೊಳ್ಳಲಾಗಿದ್ದು, ಮುಂದಿನ ಒಂದು ವಾರದೊಳಗೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಆರಂಭಗೊಳ್ಳಲಿದೆ. ಮೈಷುಗರ್ ವ್ಯಾಪ್ತಿಯ ಕಬ್ಬು ಬೆಳೆಗಾರರು ಕಾರ್ಖಾನೆಗೆ ಕಬ್ಬು ಸಾಗಿಸುವ ಮೂಲಕ ಕಬ್ಬು ಅರೆಯುವಿಕೆ ಕಾರ್ಯ ಸುಗಮನವಾಗಿ ನಡೆಯಲು ಸಹಕರಿಸಬೇಕು. ಯಾವುದೇ ಕಾರಣಕ್ಕೂ ಕಬ್ಬನ್ನು ಖಾಸಗಿ ಕಾರ್ಖಾನೆಗಳಿಗೆ ಸಾಗಿಸಬಾರದು ಎಂದು ಸಲಹೆ ನೀಡಿದರು.
ಪ್ರತಿ ವರ್ಷ ಆಗಸ್ಟ್‌-ಸೆಪ್ಟಂಬರ್ ತಿಂಗಳಲ್ಲಿ ಕಾರ್ಖಾನೆಗೆ ಚಾಲನೆ ನೀಡಲಾಗುತ್ತಿತ್ತು. ಈ ಬಾರಿ ರೈತರಿಗೆ ಅನುಕೂಲವಾಗುವಂತೆ ಜೂನ್ ತಿಂಗಳಲ್ಲೇ ಕಬ್ಬು ಅರೆಯುವಿಕೆಗೆ ಚಾಲನೆ ನೀಡಲಾಗಿದೆ. ಸರ್ಕಾರ ಕೂಡ 50 ಕೋಟಿ ರೂಪಾಯಿ ಹಣವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡುವ ಮೂಲಕ ಕಾರ್ಖಾನೆ ಕಾರ್ಯಾಚರಣೆಗೆ ನೆರವಾಗಿದೆ ಎಂದು ತಿಳಿಸಿದರು.
ಕಾರ್ಖಾನೆಯಲ್ಲಿ ಸಹ ವಿದ್ಯುತ್ ಘಟಕ, ಡಿಸ್ಟಿಲರಿ ಘಟಕ ಸಮರ್ಪಕವಾಗಿ ನಡೆಯಲು ಹಾಗೂ ಮಲಾಸಸ್ ಉತ್ಪದನೆ ಹೆಚ್ಚಾಗಬೇಕಾದರೆ ನಿರೀಕ್ಷಿತ ಪ್ರಮಾಣದಲ್ಲಿ ಕಬ್ಬು ಅರೆಯುವಿಕೆಯ ಕಾರ್ಯ ನಡೆಯಬೇಕು. ಸಕ್ಕರೆ ಉತ್ಪಾದನೆಗಷ್ಟೇ ಸೀಮಿತಗೊಳಿಸಿದರೆ ಕಾರ್ಖಾನೆಯನ್ನು ಸುಧಾರಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಹಾಲಿ ಎರಡು ವರ್ಷಗಳ ಪ್ರಾಯೋಗಿಕ ಕಾರ್ಯಾಚರಣೆಗೆ ಬಿಜೆಪಿ ಸರ್ಕಾರ ಪುಣೆ ಹಾಗೂ ಹೈದ್ರಾಬಾದ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಆ ಒಪ್ಪಂದವನ್ನು ಮುಂದುವರಿ
ಸಬೇಕೋ ಬೇಡವೋ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಾಗುವುದು.ಈಗ ಕಬ್ಬು ಅರೆಯುವಿಕೆಗೆ ಅನುಕೂಲವಾ
ಗುವಂತೆ ವ್ಯವಸ್ಥೆ ಮಾಡುವುದಕ್ಕೆ ಆದ್ಯತೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕಾರ್ಖಾನೆಯಲ್ಲಿರುವ ಸಕ್ಕರೆ ಮಾರಾಟಕ್ಕೆ ಕ್ರಮವಹಿಸಲಾಗಿದೆ. ಸಕ್ಕರೆ ಮಾರಾಟ ಮಾಡಲು ಇ-ಟೆಂಡರ್ ಕರೆಯಲಾಗಿದ್ದು, ಒಬ್ಬರು ಮಾತ್ರ ಭಾಗವಹಿಸಿದ್ದಾರೆ. ದರ ವ್ಯತ್ಯಾಸದಿಂದಾಗಿ ಸಕ್ಕರೆ ಮಾರಾಟ ಮಾಡುವುದಕ್ಕೆ ಸಾಧ್ಯವಾಗಿಲ್ಲ.ಉತ್ತಮ ದರ ಸಿಕ್ಕಲ್ಲಿ ತಕ್ಷಣವೇ ಸಕ್ಕರೆ ಮಾರಾಟ ಮಾಡಲಾಗುವುದು ಎಂದು ಹೇಳಿದರು.
ಈ ವೇಳೆ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ಹೊಸ ಕಾರ್ಖಾನೆ ನಿರ್ಮಾಣ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಲಾಗಿತ್ತು.ಅದನ್ನು ಎಲ್ಲಿ ಮಾಡಿದರೆ ಸೂಕ್ತ ಎನ್ನುವುದನ್ನು ಶಾಸಕರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವದು ಎಂದು ಹೇಳಿದರು.
ಕಾರ್ಖಾನೆ ಇದುವರೆಗೆ ಹಲವು ರಾಜಕೀಯ ಕಾರಣಗಳಿಂದಾಗಿ ಸಮರ್ಪಕವಾಗಿ ಮುನ್ನಡೆಯಲು ಸಾಧ್ಯವಾಗಿರಲ್ಲ. ಇದೀಗ ಸರ್ಕಾರ ರಚನೆಯಾದ 15 ದಿನದಲ್ಲೇ 50 ಕೋಟಿ ಹಣ ಬಿಡುಗಡೆ ಮಾಡಿ ಕಾರ್ಖಾನೆ ಸುಗಮನವಾಗಿ ನಡೆಯಲು ಸರ್ಕಾರ ನೆರವಾಗಿದೆ. ಮುಂದಿನ ದಿನಗಳಲ್ಲಿ ಸಹ ವಿದ್ಯುತ್ ಘಟಕ, ಡಿಸ್ಟಿಲರಿ ಘಟಕ ಆರಂಭಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ವ್ಯವಸ್ಥಾಪಕ ಹುದ್ದೆಗೆ ಶಾಶ್ವತವಾಗಿ ಐಎಎಸ್ ಅಧಿಕಾರಿಯೊಬ್ಬರನ್ನು ನೇಮಿಸುವಂತೆ ರೈತ ಮುಖಂಡರು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರಲ್ಲಿ ಮನವಿ ಮಾಡಿದಾಗ, ಐಎಎಸ್ ಅಧಿಕಾರಿಗಳು ಕಾರ್ಖಾನೆಯನ್ನು ನಡೆಸುವುದಿಲ್ಲ. ತಾಂತ್ರಿಕವಾಗಿ ಪರಿಣಿತಿ ಹೊಂದಿರುವವರು ಕಾರ್ಖಾನೆಯನ್ನು ಮುನ್ನಡೆಸುತ್ತಾರೆ. ಅದಕ್ಕೆ ಪೂರಕವಾಗಿ ಅಧಿಕಾರಿಗಳು ಇದ್ದಾರೆ. ಅವರ ಮೂಲಕ ಕಾರ್ಖಾನೆಯನ್ನು ಸಮರ್ಥವಾಗಿ ಮುನ್ನಡೆಸುವ ಭರವಸೆ ನಮಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಈ ವೇಳೆ ಶಾಸಕರಾದ ಪಿ.ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳೀಗೌಡ, ಮಧು ಮಾದೇಗೌಡ, ಸಂಸದೆ ಸುಮಲತಾ ಅಂಬರೀಶ್, ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ, ಜಿ.ಪಂ ಸಿಇಓ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ತಾ.ಪಂ. ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮುಖಂಡರಾದ ಅಂಜನಾ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾ ಸಾಹೇಬ್ ಪಾಟೀಲ, ಸೀನಿಯರ್ ಇಂಜಿನಿಯರ್ ಮಹೇಂದ್ರ ಸೇರಿದಂತೆ ಇತರರು ಹಾಜರಿದ್ದರು.