ಮನೆ ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು ಅನ್ನದಾತರಿಗೆ ವೈದ್ಯರಂತೆ ಕಾರ್ಯನಿರ್ವಹಿಸಿ: ಬಿ.ಸಿ.ಪಾಟೀಲ್‌

ಕೃಷಿ ವಿಶ್ವವಿದ್ಯಾಲಯಗಳು ಅನ್ನದಾತರಿಗೆ ವೈದ್ಯರಂತೆ ಕಾರ್ಯನಿರ್ವಹಿಸಿ: ಬಿ.ಸಿ.ಪಾಟೀಲ್‌

0

ಬೆಂಗಳೂರು (Bengaluru): ಕೃಷಿ ವಿಶ್ವವಿದ್ಯಾಲಯಗಳು ಅನ್ನದಾತರಿಗೆ ವೈದ್ಯರಂತೆ ಕಾರ್ಯನಿರ್ವಹಿಸಬೇಕು. ಹೊಸ ಹೊಸ ಕೃಷಿ ತಾಂತ್ರಿಕತೆಗಳನ್ನು ರೈತರಿಗೆ ಪರಿಚಯಿಸಬೇಕು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಸೂಚಿಸಿದರು.

ವಿಕಾಸಸೌಧದಲ್ಲಿಂದು ರೈತರ ಆದಾಯ ದ್ವಿಗುಣಗೊಳಿಸಲು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಮೂಲಕ ಅನುಕೂಲವಾಗುವಂತೆ ತಾಂತ್ರಿಕತೆಗಳನ್ನು ಅಭಿವೃದ್ಧಿಸುವ ಕುರಿತು ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ಉನ್ನತಾಧಿಕಾರದ ಸಮಿತಿ ಸಭೆ ನಡೆಸಿದರು.

ಕೃಷಿಯಲ್ಲಿ ಡ್ರೋನ್ ಬಳಕೆ ಮೂಲಕ ಕೀಟನಾಶಕ, ಲಘು ಪೋಷಕಾಂಶಗಳು ಮತ್ತು ಬೆಳೆ ಪ್ರಚೋದಕಗಳ ಸಿಂಪಡಣೆ, ಅವುಗಳ ಪ್ರಮಾಣ ಬೆಳೆವಾರು ಬಳಕೆ ಕುರಿತು ಸಂಶೋಧನೆಯನ್ನು ನಡೆಸಲು ಅನುಕೂಲವಾಗುವಂತೆ ನೂತನ ಪದ್ಧತಿಗಳನ್ನು ಅಭಿವೃದ್ಧಿಪಡಿಸಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಹಾಗೂ ಕ್ರೋಢೀಕರಿಸಿ ಯೋಜನಾ ವರದಿ ನೀಡಲು ಕೃಷಿ ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನಿಗಳ ತಂಡ ರಚಿಸುವ ಬಗ್ಗೆ ಈ ಹಿಂದಿನ ಸಭೆಯಲ್ಲಿ ಸೂಚಿಸಿದಂತೆ ಅದರ  ಅನುಷ್ಠಾನದ ಬಗ್ಗೆ ಸಭೆಯಲ್ಲಿ ಸಚಿವರು ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳ ಜೊತೆ ಚರ್ಚಿಸಿದರು.

ಕೆಲ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಅನುಷ್ಠಾನ ವಿಳಂಬವಾಗುತ್ತಿರುವುದನ್ನು ಗಮನಿಸಿ ಗರಂ ಆದ ಸಚಿವರು, ಸಭೆಯಲ್ಲಿ ಬರೀ ಉಪಸ್ಥಿತರಾದರಷ್ಟೇ ಸಾಲದು. ಸಭೆಯ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. ವಿಶ್ವವಿದ್ಯಾಲಯಗಳು ಪುಸ್ತಕದ ಪಠ್ಯವನ್ನಷ್ಟೇ ಬೋಧಿಸಲು ಮೀಸಲಾಗದೇ  ಕೃಷಿ ಹೊಲ ಜಮೀನು ರೈತರ ಬಗ್ಗೆ ವಾಸ್ತವ ತಿಳಿಯಬೇಕು. ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು ಅಧಿಕಾರಿಗಳು ವಿಜ್ಞಾನಿಗಳು ಸಹ ಪ್ರಾತ್ಯಕ್ಷಿಕೆಗಳಲ್ಲಿ ಭಾಗವಹಿಸಿ ಹೊಸತನ್ನು ಕಲಿಯಬೇಕು. ಪ್ರಗತಿಪರ ರೈತರನ್ನು ಇಲಾಖೆಯನ್ನು ಸಹ ಹೆಚ್ಚು ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳ ಜೊತೆ ರೈತರ ಹೊಲಗಳಿಗೆ ಭೇಟಿ ನೀಡಿ ವಾಸ್ತವ ತಿಳಿದು ರೈತರ ಸಮಸ್ಯೆ, ಬೆಳೆಗಳ ಬಗ್ಗೆ ಮಾಹಿತಿ ತಿಳಿದು ಹೊಸ ಹೊಸ ಸಂಶೋಧನೆಗಳನ್ನು ಮಾಡಬೇಕು. ರೈತರ ಹೊಲಗಳಿಗೆ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ವೈದ್ಯರಂತೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಕೃಷಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಶಿವಯೋಗಿ ಸಿ.ಕಳಸದ, ಕೃಷಿ ಆಯುಕ್ತ ಪಿ.ಶರತ್, ಕೃಷಿ ಇಲಾಖೆ ನಿರ್ದೇಶಕಿ ನಂದಿನಿ ಕುಮಾರಿ, ಅಪರ ಕೃಷಿ ನಿರ್ದೇಶಕ ವೆಂಕಟರಮಣರೆಡ್ಡಿ ಸೇರಿದಂತೆ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.