ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಕೇಂದ್ರ ಬಜೆಟ್ 2025ರಲ್ಲಿ ಕೃಷಿ ವಲಯಕ್ಕೆ ಕೆಲ ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಲಾಗಿದ್ದು, ಈ ಪೈಕಿ ಪ್ರಮುಖವಾಗಿ ಬಿಹಾರದಲ್ಲಿ ಮಖಾನಾ ಮಂಡಳಿ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ.
ಈ ಬಜೆಟ್ ದೇಶದ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು, ಒಟ್ಟಾರೆ ಅಭಿವೃದ್ಧಿಯನ್ನು ಸಾಧಿಸಲು, ಖಾಸಗಿ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸಲು, ದೇಶೀಯ ಸೂಕ್ಷ್ಮತೆಗಳನ್ನು ಬಲಪಡಿಸಲು ಮತ್ತು ಮಧ್ಯಮ ವರ್ಗದ ವೆಚ್ಚದ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನಗಳ ಭಾಗವಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೃಷಿ ಎನ್ನುವುದು ಭಾರತದ ಅಭಿವೃದ್ಧಿಯ ಮೊದಲ ಇಂಜಿನ್ ಎಂದು ಹೇಳಿದ ಅವರು, ಪ್ರಧಾನಮಂತ್ರಿ ಧನಧಾನ್ಯ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬನೆ ಸಾಧಿಸುವ ಯೋಜನೆಯಲ್ಲಿ ತೊಗರಿ, ಉದ್ದು, ಮಸೂರ್ ಬೇಳೆಗಳಿಗೆ ವಿಶೇಷ ಗಮನ ನೀಡಲಾಗುವುದು. ಧನ್ ಧಾನ್ಯ ಯೋಜನೆಯ ಭಾಗವಾಗಿ ರೈತರಿಂದ ನಾಫೆಡ್ ಮತ್ತು ಎನ್‌ಸಿಸಿಎಫ್ ದ್ವಿದಳ ಧಾನ್ಯಗಳನ್ನು ಸಂಗ್ರಹಿಸಲಿವೆ ಎಂದು ಮಾಹಿತಿ ನೀಡಿದರು. ಅದರೊಂದಿಗೆ ಬಿಹಾರದಲ್ಲಿ ಮಖಾನಾ ಮಂಡಳಿ ಸ್ಥಾಪನೆಯಾಗಲಿದ್ದ, ಹೆಚ್ಚಿನ ಇಳುವರಿ ನೀಡುವ ಬೀಜಗಳ ಮೇಲಿನ ರಾಷ್ಟ್ರೀಯ ಮಿಷನ್ ಆರಂಭವಾಗಲಿದೆ ಎಂದು ತಿಳಿಸಿದರು.
ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಆದ್ಯತೆ ನೀಡಲಾಗಿದ್ದು, ಪ್ರಧಾನಮಂತ್ರಿ ಧನಧಾನ್ಯ ಯೋಜನೆ ಘೋಷಣೆಯಾಗಿದೆ. ದ್ವಿದಳ ಧಾನ್ಯಗಳ ಸ್ವಾವಲಂಬನೆಗೆ ಒತ್ತು ನೀಡಲಾಗುವುದು. ಬಿಹಾರದಲ್ಲಿ ಮಖಾನಾ ಮಂಡಳಿ ಸ್ಥಾಪನೆಯಾಗಲಿದೆ.
ಅಸ್ಸಾಂನಲ್ಲಿ ಯೂರಿಯಾ ಸ್ಥಾವರ ಸ್ಥಾಪನೆ
ಯೂರಿಯಾ ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸಲು ಅಸ್ಸಾಂನಲ್ಲಿ ಯೂರಿಯಾ ಸ್ಥಾವರವನ್ನು ಸ್ಥಾಪಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ. ಅಸ್ಸಾಂನ ನಮ್ರಪ್‌ನಲ್ಲಿ ವಾರ್ಷಿಕ 12.7 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಸ್ಥಾವರವನ್ನು ಸರ್ಕಾರ ಸ್ಥಾಪಿಸಲಿದೆ. ಅದರೊಂದಿಗೆ ದೇಶದ ಪೂರ್ವ ಪ್ರದೇಶದಲ್ಲಿ 3 ನಿಷ್ಕ್ರಿಯ ಯೂರಿಯಾ ಸ್ಥಾವರಗಳನ್ನು ಮತ್ತೆ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು. ಗುಣಮಟ್ಟದ ಹತ್ತಿಗಾಗಿ ಹೆಚ್ಚುವರಿ ಉದ್ದವಾದ ಪ್ರಧಾನ ಹತ್ತಿ ಪ್ರಭೇದಗಳಿಗೆ ಸಹಾಯ ಮಾಡಲು ಐದು ವರ್ಷಗಳ ಕಾಲ ಹತ್ತಿ ಉತ್ಪಾದಕತೆಗಾಗಿ ಮಿಷನ್ ಘೋಷಣೆಯಾಗಿದೆ. ಇದು ಭಾರತದ ಸಾಂಪ್ರದಾಯಿಕ ಜವಳಿ ವಲಯವನ್ನು ಪುನರುಜ್ಜೀವನಗೊಳಿಸುವ ನಿರೀಕ್ಷೆಯಿದೆ ಎಂದಿದ್ದಾರೆ.
ಕಿಸಾನ್ ಕ್ರೆಡಿಟ್ ಕಾರ್ಡ್
ರೈತರಿಗೆ ಮತ್ತಷ್ಟು ಸಾಲವನ್ನು ನೀಡುವ ದೃಷ್ಟಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್‌ನ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಸಿಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈಗಾಗಲೇ ಇರುವ ಕಿಸಾನ್ ಕ್ರೆಡಿಟ್ ಕಾರ್ಡ್‌ನ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡುವ ಘೋಷಣೆಯನ್ನು ಕೆಂದ್ರ ಬಜೆಟ್‌ನಲ್ಲಿ ಮಾಡಲಾಗಿದೆ. ಬಿಹಾರದಲ್ಲಿ ಆಹಾರ ಸಂಸ್ಕರಣೆಗಾಗಿ ರಾಷ್ಟ್ರೀಯ ಉತ್ಪಾದನಾ ಮಿಷನ್ ಅನ್ನು ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ ಎಂದು ಹೇಳಿದರು.