ಮನೆ ರಾಜ್ಯ ಕೃಷಿಯೇ ಆರ್ಥಿಕ ಪ್ರಗತಿಯ ಮೂಲ : ಸೂಪರ್ ಸ್ಟಾರ್ ರೈತ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ

ಕೃಷಿಯೇ ಆರ್ಥಿಕ ಪ್ರಗತಿಯ ಮೂಲ : ಸೂಪರ್ ಸ್ಟಾರ್ ರೈತ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ

0

ಬೆಂಗಳೂರು: ಕೃಷಿಯಿಂದಲೇ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ.  ಕೃಷಿ ಪ್ರಗತಿ ಆದರೆ ಮಾತ್ರ ದೇಶದ ಆರ್ಥಿಕತೆ ಪ್ರಗತಿ ಹೊಂದುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.  ಜಿಕೆವಿಕೆ ಸಭಾಂಗಣದಲ್ಲಿ ಪತ್ರಿಕೆಯೊಂದು ಆಯೋಜಿಸಿದ್ದ “ಸೂಪರ್ ಸ್ಟಾರ್ ರೈತ” ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಧಕ ರೈತರನ್ನು ಪುರಸ್ಕರಿಸಿ ಮಾತನಾಡಿದರು.

ಶೇ.70 ರಷ್ಟು ಗ್ರಾಮೀಣ ಭಾರತ ಕೃಷಿ ಮೇಲೆ ಅವಲಂಭಿತವಾಗಿದೆ. ಆಹಾರ ಉತ್ಪಾದನೆಯಲ್ಲಿ ದೇಶ ಸ್ವಾವಲಂಭಿ, ಸ್ವಾಭಿಮಾನಿ ಆಗಲು ಕೃಷಿಕ ಸಮುದಾಯ, ರೈತ ಸಮುದಾಯ  ಕಾರಣ. ಕೃಷಿ ಅಧಿಕಾರಿಗಳು ರೈತರ ಅಭಿಪ್ರಾಯ ಪಡೆದು, ರೈತರ ಅನುಭವ ಆಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಹಕಾರ ನೀಡಬೇಕು. Lab to Land ಮತ್ತು Land to Lab ಕಡೆಗೆ ಕೃಷಿ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸೂಚನೆ ನೀಡಿದರು.

ಸಾಮಾಜಿಕ ನ್ಯಾಯ,  ವರ್ಗ ರಹಿತ ಸಮಾಜ ಆಗಬೇಕಾದರೆ ರೈತರಿಗೆ ಆರ್ಥಿಕವಾಗಿ ಶಕ್ತಿ ನೀಡಬೇಕು. ಇಲ್ಲದಿದ್ದರೆ ಬದಲಾವಣೆ ಸಾಧ್ಯವಿಲ್ಲ. ಸಾಮಾಜಿಕ ಬದಲಾವಣೆ ದಿಕ್ಕಿನಲ್ಲಿ ನಾವು ಗ್ಯಾರಂಟಿಗಳನ್ನು ರೂಪಿಸಿ ಜಾರಿ ಮಾಡಿದೆವು. ಇದರಿಂದ ರಾಜ್ಯ ದಿವಾಳಿ ಆಗುತ್ತದೆ ಎಂದು ಪ್ರಧಾನಿ ಮೋದಿಯವರೂ ಸುಳ್ಳು ಹೇಳಿದ್ದರು. ಸತ್ಯ ಏನು ಎಂದು ನಾಡಿನ‌ ಜನತೆಗೆ ಮನವರಿಕೆಯಾಗಿದೆ ಎಂದರು.

ರೈತರ ಪಂಪ್ ಸೆಟ್ ಗಳಿಗೆ ವರ್ಷಕ್ಕೆ ನಮ್ಮ ಸರ್ಕಾರ 19000 ಕೋಟಿ ಸಬ್ಸಿಡಿ ನೀಡುತ್ತಿದೆ. ಕೃಷಿ ನೀರಾವರಿಗೆ 26000 ಕೋಟಿ ನೀಡಿದ್ದೇವೆ. ಆರ್ಥಿಕತೆ ದಿವಾಳಿಯಾಗಿದ್ದರೆ ಇಷ್ಟು ದೊಡ್ಡ ಮಟ್ಟದಲ್ಲಿ ರೈತಪರ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಲು ಸಾಧ್ಯವಿತ್ತೇ ಎಂದು ರೈತ ಸಮಾಜವನ್ನು ಪ್ರಶ್ನಿಸಿದರು.

ಇಂತಹ ಹೊತ್ತಲ್ಲಿ ರೈತ ಸಾಧಕರನ್ನು ಗುರುತಿಸಿ ಕರೆದು ಸನ್ಮಾನಿಸುತ್ತಿರುವುದು ಅತ್ಯಂತ ಪ್ರೋತ್ಸಾಹದಾಯಕ. ಸಮಗ್ರ ಕೃಷಿಯನ್ನು ಮಾಡದ ಹೊರತು ಕೃಷಿ ಲಾಭದಾಯಕವಲ್ಲ. ಜನಸಂಖ್ಯೆ ಬೆಳೆಯುತ್ತಿದೆ. ನಮ್ಮ ರಾಜ್ಯದಲ್ಲಿ ರಾಜಸ್ತಾನದ ನಂತರ ಅತಿ ಹೆಚ್ಚು ಒಣ ಕೃಷಿ ಭೂಮಿ ಹೆಚ್ಚು ಹೊಂದಿದೆ. ನಾವು ಜಾರಿಗೆ ತಂದಿದ್ದ ಕೃಷಿ ಭಾಗ್ಯ ಯೋಜನೆಯನ್ನು ನಮ್ಮ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿತ್ತು. ಈಗ ನಾವೇ ಅಧಿಕಾರಕ್ಕೆ ಬಂದು ಮತ್ತೆ ಜಾರಿ ಮಾಡಿದ್ದೇವೆ. ಇಲ್ಲಿಯವರೆಗೂ 24000 ಕೃಷಿ ಹೊಂಡ ನಿರ್ಮಿಸಿ ದಾಖಲೆ ಮಾಡಲಾಗಿದೆ ಎಂದರು.

ನಾನೂ ರೈತ ಕುಟುಂಬದಿಂದ ಬಂದವನು, ಕೃಷಿ ಬದುಕು-ರೈತರ ಬದುಕು, ಗ್ರಾಮೀಣ ಬದುಕಿನ‌ ಕಷ್ಟ ನಷ್ಟಗಳು ನನಗೆ ಗೊತ್ತಿದೆ. ಹೀಗಾಗಿ ರೈತರ ಪರವಾಗಿ ಸರ್ಕಾರದ ಮುಂದೆ ಬಂದ ಎಲ್ಲಾ ಪ್ರಸ್ತಾವನೆಗಳಿಗೂ ಮಂಜೂರಾತಿ ನೀಡುತ್ತಿದ್ದೇವೆ. ರೈತರಿಗೆ ಹೆಚ್ಚು ಒತ್ತು ಕೊಡುವ ಕೆಲಸಗಳನ್ನು ಮಾಡುತ್ತಿದ್ದೇವೆ. ಅದರಲ್ಲೂ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ  ಎಂದರು.

 43% ಸಾವಯವ ಇಂಗಾಲ ಕಡಿಮೆ ಆಗುತ್ತಿರುವುದರಿಂದ ಭೂಮಿಯ ಫಲವತ್ತತೆ ಕಡಿಮೆ ಆಗಿ ರೈತರ ಉತ್ಪಾದನೆ, ಆದಾಯ ಕಡಿಮೆ ಆಗುತ್ತದೆ. ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಜಾರಿಗೆ ತಂದ “ನರೇಗಾ” ಕೃಷಿಗೆ ಬಹಳ ದೊಡ್ಡ ಅನುಕೂಲ ಕಲ್ಪಿಸಿತು ಎಂದರು.  ಕೃಷಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಅನೇಕ ಗಣ್ಯರು  ಉಪಸ್ಥಿತರಿದ್ದರು.