ಮಂಗಳೂರು: ಲಂಚ ಸ್ವೀಕರಿಸುತ್ತಿದ್ದಾಗ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಶನಿವಾರ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಮಂಗಳೂರಿನ ಉಪ ಕೃಷಿ ನಿರ್ದೇಶಕಿ ಭಾರತಮ್ಮ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಅಧಿಕಾರಿ.
ನಿವೃತ್ತ ಅರಣ್ಯಾಧಿಕಾರಿ ಪರಮೇಶ್ ಎನ್. ಪಿ. ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದೂರುದಾರರ ಪ್ರಕಾರ, ಭಾರತಮ್ಮ ಅವರು “ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಡಬ್ಲ್ಯುಸಿಡಿ 2.0” ಗೆ ಸಂಬಂಧಿಸಿದ ಬಿಲ್ಗಳಿಗೆ 50 ಲಕ್ಷ ರೂ. ಬಾಕಿ ಬಿಡುಗಡೆ ಮಾಡಲು 15 % ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
1 ಲಕ್ಷ ರೂ.ಲಂಚ ಸ್ವೀಕರಿಸುತ್ತಿದ್ದಾಗಲೇ ಭಾರತಮ್ಮ ಸಿಕ್ಕಿಬಿದ್ದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.














