ಬೆಂಗಳೂರು: ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಗೆ ಪರಿಹಾರವಾಗಿ ಕೃಷಿ ಕ್ಷೇತ್ರ ಹಾಗೂ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಆಹಾರ ಸಂಸ್ಕರಣಾ ಉದ್ಯಮಗಳು ಉತ್ತಮ ಆಯ್ಕೆಯಾಗಿ ಹೊರಹೊಮ್ಮುತ್ತಿವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಬೆಂಗಳೂರು ಟೌನ್‌ಹಾಲ್‌ನಲ್ಲಿ ನಡೆದ ‘ಕೃಷಿ ಜಾಗೃತಿ ಕಾರ್ಯಾಗಾರ ಹಾಗೂ ಖೆತಿ ಪ್ರಶಸ್ತಿ ಪ್ರದಾನ ಸಮಾರಂಭ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಸ್ವ-ಉದ್ಯೋಗ ಅವಕಾಶಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯುವ ಸಮುದಾಯ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಸಾಂಪ್ರದಾಯಿಕ ಕೃಷಿಗೆ ತಂತ್ರಜ್ಞಾನ, ವೈಜ್ಞಾನಿಕ ಪದ್ಧತಿಯ ಅಳವಡಿಕೆಯಿಂದ ಸಮಯ ಮತ್ತು ಶ್ರಮದ ಉಳಿತಾಯವಾಗುತ್ತಿದೆ ಹಾಗೂ ಆದಾಯವೂ ಹೆಚ್ಚುತ್ತಿದೆ. ರೈತರು ತಮ್ಮ ಉತ್ಪನ್ನಗಳಿಗೆ ಮೌಲ್ಯವರ್ಧನೆ ನೀಡಿ, ಮಾರುಕಟ್ಟೆ ಜ್ಞಾನವನ್ನು ವಿಸ್ತಾರಗೊಳಿಸಬೇಕು ಎಂದು ಸಲಹೆ ನೀಡಿದರು.
ಕೆಪೆಕ್ ಸಂಸ್ಥೆ ಪಿಎಂಎಫ್‌ಎಂಇ ಯೋಜನೆಯಡಿಯಲ್ಲಿ ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗೆ ಅವಕಾಶ ನೀಡುತ್ತಿದೆ. ಈ ಯೋಜನೆಯಡಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಒಟ್ಟು ₹15 ಲಕ್ಷ ಸಬ್ಸಿಡಿ ದೊರೆಯಲಿದೆ. ಇದಕ್ಕಾಗಿ ₹206 ಕೋಟಿ ಮೀಸಲಾಗಿದ್ದು, ರೈತರ ಮಕ್ಕಳು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.
ಈ ವರ್ಷದಲ್ಲಿ 5,000 ಹೊಸ ಆಹಾರ ಉದ್ಯಮಗಳ ಸ್ಥಾಪನೆ ಗುರಿಯಾಗಿದೆ. ಕೃಷಿ ನವೋದ್ಯಮ ಯೋಜನೆಯಡಿಯಲ್ಲಿ ₹8 ಕೋಟಿ ಸಹಾಯಧನದಲ್ಲಿ 40 ನವೋದ್ಯಮಗಳು ಸ್ಥಾಪನೆಯಾಗಿವೆ ಎಂಬ ಮಾಹಿತಿಯನ್ನು ಅವರು ಹಂಚಿಕೊಂಡರು.
₹128 ಕೋಟಿ ವೆಚ್ಚದಲ್ಲಿ 344 ಹಾರ್ವೆಸ್ಟರ್ ಹಬ್‌ಗಳು ವಿತರಣೆ ಮಾಡಲಾಗಿದ್ದು, ರೈತರನ್ನು ಯಾಂತ್ರಿಕವಾಗಿ ಸಬಲಗೊಳಿಸಲು ₹900 ಕೋಟಿ ವೆಚ್ಚದಲ್ಲಿ ಕೃಷಿ ಯಂತ್ರೋಪಕರಣಗಳು ಮತ್ತು ₹1,075 ಕೋಟಿ ವೆಚ್ಚದಲ್ಲಿ ಸೂಕ್ಷ್ಮ ನೀರಾವರಿ ಪರಿಕರಗಳ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಲಾನಯನ ಇಲಾಖೆ ನಿರ್ದೇಶಕ ಬಂಥನಾಳ, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್, ನರ್ಬಾಡ್‌ನ ಪ್ರಕಾಶ್, ಎಸ್.ಬಿ.ಐ ವ್ಯವಸ್ಥಾಪಕ ನಿರ್ದೇಶಕ ವಿ.ಎನ್. ಶರ್ಮಾ ಮತ್ತು ಎಸ್.ಎಲ್.ಬಿ.ಸಿ. ಸಂಯೋಜಕ ಭಾಸ್ಕರ್ ಭಟ್ಟಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ವೇಳೆ ಖೆತಿ ಪುರಸ್ಕಾರ ವಿಜೇತರನ್ನು ಸನ್ಮಾನಿಸಲಾಯಿತು.














