ಮನೆ ಕಾನೂನು ಮತ್ತೆ ದೆಹಲಿಯನ್ನು ಕಾಡಲಾರಂಭಿಸಿದ ಕೃಷಿ ತ್ಯಾಜ್ಯ ಮಾಲಿನ್ಯ ಸಮಸ್ಯೆ: ವಿವರಣೆ ಕೇಳಿದ ಸುಪ್ರೀಂ ಕೋರ್ಟ್

ಮತ್ತೆ ದೆಹಲಿಯನ್ನು ಕಾಡಲಾರಂಭಿಸಿದ ಕೃಷಿ ತ್ಯಾಜ್ಯ ಮಾಲಿನ್ಯ ಸಮಸ್ಯೆ: ವಿವರಣೆ ಕೇಳಿದ ಸುಪ್ರೀಂ ಕೋರ್ಟ್

0

ಗೋಧಿ ಮತ್ತು ಭತ್ತದಂತಹ ಧಾನ್ಯಗಳನ್ನು ಕೊಯ್ಲು ಮಾಡಿದ ನಂತರ ಹೊಲಗಳಲ್ಲಿ ಉಳಿಯುವ ಕೃಷಿ ತ್ಯಾಜ್ಯ (ಕೂಳೆ) ಸುಡುವುದಕ್ಕೆ ಇರುವ ನಿರ್ಬಂಧ ಉಲ್ಲಂಘಿಸುವವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಕುರಿತು ಸುಪ್ರೀಂ ಕೋರ್ಟ್ ವಾಯು ಗುಣಮಟ್ಟ ನಿರ್ವಹಣಾ ಆಯೋಗದಿಂದ (ಸಿಎಕ್ಯೂಎಂ) ವಿವರಣೆ ಕೇಳಿದೆ.

Join Our Whatsapp Group

ದೆಹಲಿಯ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯ ಈ ವಿಚಾರ ತಿಳಿಸಿದೆ. ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕೃಷಿ ತ್ಯಾಜ್ಯ ಸುಡುವುದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ನ್ಯಾಯಾಲಯ  ಕಳೆದ ಕೆಲವು ವರ್ಷಗಳಿಂದ ಹೇಳುತ್ತಲೇ ಬಂದಿದೆ.

ಅಮಿಕಸ್ ಕ್ಯೂರಿ ಮತ್ತು ಹಿರಿಯ ವಕೀಲೆ ಅನಿತಾ ಶೆಣೈ ಅವರು ಇಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠದೆದುರು ಪ್ರಕರಣ ಪ್ರಸ್ತಾಪಿಸಿದರು .

“ಕೃಷಿ ತ್ಯಾಜ್ಯ ಸುಡುವುದು ಆರಂಭವಾಗಿದೆ. ಅದನ್ನು ತಡೆಯಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಕ್ಯೂಎಂಗೆ ವಿವರಿಸುವಂತೆ ನಿರ್ದೇಶನ ನೀಡಬೇಕು ಎಂದು ನಾನು ಕೇಳಿಕೊಳ್ಳುತ್ತಿದ್ದೇನೆ” ಎಂದು ಅವರು ಹೇಳಿದರು.

ಈ ವೇಳೆ, ” ಹೌದು, ನಮಗೆ ಉತ್ತರಗಳು ಬೇಕು” ಎಂದು ನ್ಯಾಯಮೂರ್ತಿ ಓಕಾ ಶುಕ್ರವಾರ ಪ್ರತಿಕ್ರಿಯಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿದರು.

ಸಿಎಕ್ಯೂಎಂ ಮತ್ತು ಕೇಂದ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ , ಅಗತ್ಯ ಮಾಹಿತಿಗಳನ್ನು ನಿಗದಿತ ದಿನದೊಳಗೆ ಒದಗಿಸಲಾಗುವುದು ಎಂದು ಭರವಸೆ ನಿಡಿದರು.

ಪಂಜಾಬ್‌ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಕೊಯ್ಲಿನ ಬಳಿಕ ಉಳಿಯುವ ಕೃಷಿ ತ್ಯಾಜ್ಯವನ್ನು ಅಗಾಧ ಪ್ರಮಾಣದಲ್ಲಿ ಸುಡುವ ಪರಿಣಾಮ ಗಾಳಿಯ ಗುಣಮಟ್ಟ ಕುಸಿಯುತ್ತಿರುವುದು ವರ್ಷಂಪ್ರತಿ ಘಟಿಸುವ ವಿದ್ಯಮಾನ. ದೆಹಲಿಯನ್ನು ಸುತ್ತುವರೆದಿರುವ ರಾಜ್ಯಗಳಲ್ಲಿ ನಡೆಯುವ ಈ ಮಾಲಿನ್ಯ ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯವನ್ನು ಇನ್ನಷ್ಟು ಹೆಚ್ಚಿಸಿ ಹೊಗೆ ಮತ್ತು ಮಂಜು ಕೂಡಿ ಸೃಷ್ಟಿಯಾಗುವ ಹೊಂಜಿನಂತಹ ಸಮಸ್ಯೆಗೆ ಕಾರಣವಾಗುತ್ತದೆ.

ಮುಂದಿನ ಚಳಿಗಾಲದ ಹೊತ್ತಿಗೆ ವಾಯುಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕಳೆದ ಡಿಸೆಂಬರ್‌ನಲ್ಲಿ, ಪಂಜಾಬ್, ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ವಾಯುಮಾಲಿನ್ಯ ಮತ್ತು ಕೃಷಿ ತ್ಯಾಜ್ಯ ಸುಡುವಿಕೆ ನಿಯಂತ್ರಿಸಲು ಸಹಕರಿಸುವಂತೆ ಸುಪ್ರೀಂ ಕೋರ್ಟ್ ಎಲ್ಲಾ ಪಾಲುದಾರ ರಾಜ್ಯಗಳಿಗರೆ ಸಲಹೆ ನೀಡಿತ್ತು.

ಈ ನಿಟ್ಟಿನಲ್ಲಿ, ಪಂಜಾಬ್‌ ಸರ್ಕಾರ ಕೃಷಿ ತ್ಯಾಜ್ಯ ಸುಡುವುದನ್ನು ಮುಂದುವರೆಸುವ ರೈತರ ಮೇಲೆವಿಧಿಸಲಾಗುವ ಪರಿಸರ ಪರಿಹಾರ ಸೆಸ್‌ನ ಸಂಗ್ರಹ ಕಾರ್ಯ ತ್ವರಿತಗೊಳಿಸಲು ಅದು ಸೂಚಿಸಿತ್ತು.