ಮನೆ ಕಾನೂನು ಅಗಸ್ಟಾ ವೆಸ್ಟ್‌ ಲ್ಯಾಂಡ್‌ ಹಗರಣ: ಇ ಡಿ ಪ್ರಕರಣದಲ್ಲಿ ಕ್ರಿಶ್ಚಿಯನ್ ಮಿಶೆಲ್‌ ಗೆ ದೆಹಲಿ ಹೈಕೋರ್ಟ್...

ಅಗಸ್ಟಾ ವೆಸ್ಟ್‌ ಲ್ಯಾಂಡ್‌ ಹಗರಣ: ಇ ಡಿ ಪ್ರಕರಣದಲ್ಲಿ ಕ್ರಿಶ್ಚಿಯನ್ ಮಿಶೆಲ್‌ ಗೆ ದೆಹಲಿ ಹೈಕೋರ್ಟ್ ಜಾಮೀನು

0

ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಬ್ರಿಟಿಷ್ ಪ್ರಜೆ ಕ್ರಿಶ್ಚಿಯನ್ ಮಿಶೆಲ್‌ಗೆ ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ.

Join Our Whatsapp Group

ಆರು ವರ್ಷಗಳಿಗೂ ಹೆಚ್ಚು ಕಾಲ ಅವರು ಜೈಲು ಶಿಕ್ಷೆ ಅನುಭವಿಸಿರುವುದನ್ನು ಹಾಗೂ ಪ್ರಕರಣದ ವಿಚಾರಣೆ ಇನ್ನೂ ಆರಂಭವಾಗದೆ ಇರುವುದನ್ನು ಪರಿಗಣಿಸಿ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಈ ಆದೇಶ ಹೊರಡಿಸಿದ್ದಾರೆ.

ಅನುಸೂಚಿತ ಅಪರಾಧಕ್ಕೆ ಸಂಬಂಧಿಸಿದಂತೆ ಸಿಬಿಐ ಹೂಡಿದ್ದ ಪ್ರಕರಣದಲ್ಲಿ ಮಿಶೆಲ್‌ಗೆ ಸುಪ್ರೀಂ ಕೋರ್ಟ್‌ ಜಾಮೀನು ನೀಡಿರುವುದನ್ನು ನ್ಯಾಯಾಲಯ ಇದೇ ವೇಳೆ ಪರಿಗಣಿಸಿತು.

ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿರುವ ಅನುಸೂಚಿತ ಅಪರಾಧದಲ್ಲಿ ಮಿಶೆಲ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ ಎಂದು ನ್ಯಾಯಾಲಯವು ಗಮನಿಸಿದೆ.

“ಅರ್ಜಿದಾರನು ಅನುಭವಿಸಿದ ಸುಮಾರು ಆರು ವರ್ಷ ಮತ್ತು ಎರಡು ತಿಂಗಳ ಜೈಲು ಶಿಕ್ಷೆಯನ್ನು ಪರಿಗಣಿಸಿ, ಜೊತೆಗೆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಹಾಗೂ ವಿಚಾರಣೆ ಇನ್ನೂ ಪ್ರಾರಂಭವಾಗಿಲ್ಲ ಎಂಬ ಕಾರಣಕ್ಕೆ ಗೌರವಾನ್ವಿತ ಸುಪ್ರೀಂ ಕೋರ್ಟ್‌ನಿಂದ ಅನುಸೂಚಿತ ಅಪರಾಧ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಲಾಗಿದೆ ಎಂಬ ಅಂಶವನ್ನೂ ಪರಿಗಣಿಸಿ, ಮತ್ತು ಪಿಎಂಎಲ್‌ಎ ಸೆಕ್ಷನ್ 4 ರ ಅಡಿಯಲ್ಲಿ ವಿಚಾರಣೆ ಇನ್ನೂಆರಂಭವಾಗದೆ ಇರುವುದರಿಂದ ಗರಿಷ್ಠ ನಿಗದಿತ ಶಿಕ್ಷೆಯ ಉಳಿದ ಅವಧಿಯೊಳಗೆ ಈ ಪ್ರಕರಣದಲ್ಲಿ ವಿಚಾರಣೆ ಮುಗಿಯುವ ಸಾಧ್ಯತೆಯಿಲ್ಲದ ಹಿನ್ನೆಲೆಯಲ್ಲಿ ಈ ನ್ಯಾಯಾಲಯ ಪ್ರಸ್ತುತ ಅರ್ಜಿದಾರರಿಗೆ ನಿಯತ ಜಾಮೀನು ನೀಡಲು ಒಲವು ತೋರುತ್ತಿದೆ” ಎಂದು ಪೀಠ ಹೇಳಿತು.

ಆದರೆ ತಲಾ ₹5,00,000 ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಶ್ಯೂರಿಟಿಯನ್ನು ಒದಗಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಪಾಸ್‌ಪೋರ್ಟ್‌ ಒಪ್ಪಿಸಬೇಕು ಎಂದು ಜಾಮೀನು ನೀಡುವಾಗ ಷರತ್ತು ವಿಧಿಸಲಾಗಿದೆ.

ಹೈಕೋರ್ಟ್ ಅನುಮತಿಯಿಲ್ಲದೆ ಪಾಸ್‌ಪೋರ್ಟನ್ನು ಅರ್ಜಿದಾರನಿಗೆ ಮರಳಿಸುವಂತಿಲ್ಲ ಎಂದು ಕೂಡ ನ್ಯಾಯಮೂರ್ತಿಗಳು ಇದೇ ವೇಳೆ ಸ್ಪಷ್ಟಪಡಿಸಿದರು.

ಪರಿಣಾಮ ಮೈಕೆಲ್ ಸದ್ಯಕ್ಕೆ ಭಾರತದಲ್ಲಿಯೇ ಇರಬೇಕಾಗುತ್ತದೆ. ಜೊತೆಗೆ ವಿದೇಶ ಪ್ರವಾಸ ಮಾಡಲು ಬಯಸಿದರೆ ಹೈಕೋರ್ಟ್‌ನಿಂದ ಅನುಮತಿ ಪಡೆಯಬೇಕಾಗುತ್ತದೆ.

ವಿಚಾರಣಾ ನ್ಯಾಯಾಲಯ ತನಗೆ ಸೂಕ್ತವೆಂದು ತೋರುವ ಇತರ ಷರತ್ತುಗಳನ್ನು ವಿಧಿಸಬಹುದು ಎಂದು ಕೂಡ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹೂಡಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದೆ ಅವರಿಗೆ ಜಾಮೀನು ನೀಡಿತ್ತು. ಇಡಿ ಪ್ರಕರಣದಲ್ಲಿ ಈಗ ಜಾಮೀನು ದೊರೆತಿರುವುದರಿಂದ, ಮೈಕೆಲ್ ಜೈಲಿನಿಂದ ಹೊರಬರಲಿದ್ದಾರೆ.

ಸಿಬಿಐ ಪ್ರಕರಣದಲ್ಲಿ ಮಿಶೆಲ್‌ ಪರವಾಗಿ ವಾದಿಸಿದ್ದ ವಕೀಲರಾದ ಅಲ್ಜೋ ಜೋಸೆಫ್, ಶ್ರೀರಾಮ್ ಪರಾಕ್ಕಟ್ ಮತ್ತು ಎಂ ಎಸ್ ವಿಷ್ಣು ಶಂಕರ್ ಅವರೇ ಈ ಪ್ರಕರಣದಲ್ಲಿಯೂ ಅವರನ್ನು ಪ್ರತಿನಿಧಿಸಿದ್ದರು.