ಬೆಂಗಳೂರು: ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡಿರುವ ಭೀಕರ ದುರಂತಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ ದುರ್ಘಟನೆಯಿಂದಾದ ಸಾವು-ನೋವಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, “ಅಹಮದಾಬಾದ್‌ನ ಮೇಘಾನಿ ಪ್ರದೇಶದ ಮೆಡಿಕಲ್ ಕಾಲೇಜ್ ಬಳಿ ಏರ್ ಇಂಡಿಯಾ ವಿಮಾನ ಪತನಗೊಂಡಿದೆ ಎಂಬ ಸುದ್ದಿ ಆಘಾತಕಾರಿ ಮತ್ತು ದುಃಖಕರವಾಗಿದೆ. 200ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ವಿಮಾನ ಏಳುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಿಂದ ಹೆಚ್ಚಿನ ಹಾನಿ ಆಗದಿರಲಿ ಎಂದು ಪ್ರಾರ್ಥಿಸೋಣ” ಎಂದಿದ್ದಾರೆ.
242 ಪ್ರಯಾಣಿಕರನ್ನು ಹೊತ್ತಿದ್ದ ಬೋಯಿಂಗ್ ಡ್ರೀಮ್‌ಲೈನರ್ 787 ಮಾದರಿಯ ಏರ್ ಇಂಡಿಯಾ ವಿಮಾನವು ಲಂಡನ್‌ಗೆ ಹೊರಡುತ್ತಿದ್ದ ಸಂದರ್ಭ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಕೇವಲ 2 ಕಿ.ಮೀ ದೂರದಲ್ಲಿರುವ ಮೇಘಾನಿ ಮೆಡಿಕಲ್ ಕಾಲೇಜ್ ಮೇಲೆ ಪತನಗೊಂಡಿದೆ. ಟೇಕ್ಆಫ್ ಆದ ಬಳಿಕ ತಾಂತ್ರಿಕ ದೋಷವೊಂದು ಉಂಟಾಗಿ, ಇಂಜಿನ್‌ನಲ್ಲಿ ತೀವ್ರ ತೊಂದರೆಯಾಗಿದ್ದು ಇದಕ್ಕೆ ಕಾರಣ ಎನ್ನಲಾಗಿದೆ.
ಘಟನೆಯ ಸ್ಥಳದಲ್ಲಿ ಉಂಟಾದ ಸ್ಫೋಟ ಹಾಗೂ ತೀವ್ರ ಹೊಗೆಯಿಂದ ಅಹಿತಕರ ಪರಿಸ್ಥಿತಿ ಉಂಟಾಗಿದೆ. ಸ್ಥಳಕ್ಕೆ ತಕ್ಷಣವೇ 7 ಅಗ್ನಿಶಾಮಕ ವಾಹನಗಳು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರ್ಯಾಚರಣೆಗೆ ಧುಮುಕಿವೆ. ಪ್ರಸ್ತುತ 30 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ.
ಈ ದುರಂತದ ಸುದ್ದಿ ಹೊರಬಿದ್ದ ಬೆನ್ನಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವಾರು ರಾಷ್ಟ್ರೀಯ ನಾಯಕರು, ಬೃಹತ್ ವಿಮಾನ ಸಂಸ್ಥೆಗಳ ಮುಖ್ಯಸ್ಥರು ಕೂಡ ತಮ್ಮ ಸಂತಾಪ ಮತ್ತು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ವಾಯುಯಾನ ಇಲಾಖೆಯು ಕೂಡ ತಕ್ಷಣವೇ ತನಿಖೆಗೆ ಆದೇಶ ನೀಡಿದೆ.














