ಮನೆ ರಾಷ್ಟ್ರೀಯ ಅಹಮದಾಬಾದ್ ವಿಮಾನ ದುರಂತ: ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿರುವ ಸತ್ಯ, ನಾಳೆಯೊಳಗೆ ಬಹಿರಂಗವಾಗುವ ನಿರೀಕ್ಷೆ!

ಅಹಮದಾಬಾದ್ ವಿಮಾನ ದುರಂತ: ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿರುವ ಸತ್ಯ, ನಾಳೆಯೊಳಗೆ ಬಹಿರಂಗವಾಗುವ ನಿರೀಕ್ಷೆ!

0

ಅಹಮದಾಬಾದ್: ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ವಿಮಾನ ದುರಂತವೆನ್ನಿಸಿಕೊಂಡಿರುವ ಅಹಮದಾಬಾದ್ ವಿಮಾನ ಪತನ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಈ ದುರಂತದ ಹಿಂದಿರುವ ಅಸಲಿ ಕಾರಣ ನಾಳೆಯೊಳಗೆ ಹೊರಬೀಳುವ ನಿರೀಕ್ಷೆಯಿದೆ. ಈ ದುರಂತದಲ್ಲಿ ಪ್ರಯಾಣಿಕರು ಹಾಗೂ ಸ್ಥಳೀಯರು ಸೇರಿ 274 ಜನರು ದುರ್ಮರಣಕ್ಕೀಡಾಗಿದ್ದಾರೆ.

ವಿಮಾನ ಟೇಕಾಫ್ ಆದ ಕೇವಲ 25 ಸೆಕೆಂಡ್‌ಗಳಲ್ಲಿಯೇ ಪತನಗೊಂಡಿದ್ದು, ಅದೇ ಸ್ಥಳದಲ್ಲಿ ಬ್ಲ್ಯಾಕ್‌ಬಾಕ್ಸ್ ಮತ್ತು ಡಿವಿಆರ್ ಪತ್ತೆಯಾಗಿವೆ. ಈ ಸಾಧನಗಳ ಸುತ್ತ ನಿಂತಿರುವ ತನಿಖಾ ಅಧಿಕಾರಿಗಳು ಶೀಘ್ರದಲ್ಲೇ ಸತ್ಯವನ್ನು ಬಹಿರಂಗಪಡಿಸಲಿದೆಂದು ಅಂದಾಜಿಸಿದ್ದಾರೆ.

ಬ್ಲ್ಯಾಕ್‌ಬಾಕ್ಸ್‌ನಲ್ಲಿ ಮುಖ್ಯವಾಗಿ ಎರಡು ವಿಭಾಗಗಳಿರುತ್ತವೆ:

  1. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್): ಇದರಲ್ಲಿ ಪೈಲಟ್ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ನಡುವೆ ನಡೆದ ಸಂಭಾಷಣೆ ಆಡಿಯೋ ರೂಪದಲ್ಲಿ ದಾಖಲಾಗಿರುತ್ತದೆ.
  2. ಫ್ಲೈಟ್ ಡೇಟಾ ರೆಕಾರ್ಡರ್ (ಎಫ್‌ಡಿಆರ್): ಇಂಜಿನ್ ಸ್ಥಿತಿ, ವೇಗ, ಎತ್ತರ, ಇಂಧನ ಮಟ್ಟ ಸೇರಿದಂತೆ ವಿವಿಧ ತಾಂತ್ರಿಕ ಅಂಶಗಳ ವಿವರ ಇಲ್ಲಿ ರೆಕಾರ್ಡ್ ಆಗಿರುತ್ತದೆ.

ಈ ಸಾಧನಗಳು ಅತ್ಯಂತ ಶಕ್ತಿಶಾಲಿಯಾಗಿ ವಿನ್ಯಾಸಗೊಳ್ಳುತ್ತವೆ. 1,000 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವನ್ನೂ ಸಹಿಸಬಲ್ಲ ಸಾಮರ್ಥ್ಯವಿದೆ. ಅಲ್ಲದೆ, ಸಮುದ್ರದ ಆಳದಲ್ಲಿ 30 ದಿನಗಳವರೆಗೆ ಯಾವುದೇ ಹಾನಿಯಿಲ್ಲದೆ ಉಳಿಯುವಂತೆ ನಿರ್ಮಿಸಲಾಗಿರುತ್ತದೆ. ಆದರೆ ಅತಿಯಾದ ಹೊಡೆತ ಅಥವಾ ಉಷ್ಣಾಂಶ ಕಾರಣದಿಂದ ಒಳಗಿನ ಸೆನ್ಸಾರ್‌ಗಳು, ಚಿಪ್‌ಗಳು ಹಾನಿಗೊಳಗಾದರೂ, ಅವುಗಳನ್ನು ಮರು ಜೋಡಿಸಿ ಮಾಹಿತಿಯನ್ನು ತೆಗೆಯುವ ಸಾಧ್ಯತೆ ಇರುತ್ತದೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಕೂಡ ತನಿಖೆಯನ್ನು ಚುರುಕುಗೊಳಿಸಿದ್ದು, ಮುಂದಿನ 48 ಗಂಟೆಗಳೊಳಗೆ ಬ್ಲ್ಯಾಕ್‌ಬಾಕ್ಸ್‌ನ ವರದಿ ಲಭ್ಯವಾಗಲಿದೆ.