ಅಹಮದಾಬಾದ್: ಇತ್ತೀಚೆಗಷ್ಟೇ ಸಂಭವಿಸಿದ ಭೀಕರ ಏರ್ ಇಂಡಿಯಾ ವಿಮಾನ ಅಪಘಾತದ ಪರಿಣಾಮವಾಗಿ ಸಾವಿಗೆ ಒಳಗಾದವರ ಸಂಖ್ಯೆ 274ಕ್ಕೆ ಏರಿಕೆಯಾಗಿದ್ದು, ಈ ಅಪಘಾತವು ದೇಶವನ್ನೇ ಬೆಚ್ಚಿಬೀಳಿಸಿದೆ. ಈ ದುರಂತದಲ್ಲಿ ವಿಮಾನ ಪ್ರಯಾಣಿಕರಲ್ಲದ ಸ್ಥಳೀಯ ಜನರೂ ಸಾವಿಗೀಡಾಗಿದ್ದು, ಅವರಿಗೂ ಪರಿಹಾರ ಘೋಷಿಸಲಾಗಿದೆ.
ಅಪಘಾತ ಜನನಿಬಿಡ ವಸತಿ ಪ್ರದೇಶವೊಂದರಲ್ಲಿ ವಿಮಾನ ಪತನಗೊಂಡ ಕಾರಣದಿಂದಾಗಿ, ವಿಮಾನದ ಹೊರಗಿನ 33 ಸ್ಥಳೀಯ ನಿವಾಸಿಗಳು ಸಾವಿಗೀಡಾಗಿದ್ದರು. ಈ ಎಲ್ಲಾ ಸಂತ್ರಸ್ತರ ಕುಟುಂಬಗಳಿಗೆ ಟಾಟಾ ಗ್ರೂಪ್ ತಲಾ ₹1 ಕೋಟಿ ಪರಿಹಾರವನ್ನು ಘೋಷಿಸಿದೆ. ಇದಲ್ಲದೆ, ಗಾಯಗೊಂಡವರಿಗೆ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ಹಾಗೂ ಎಲ್ಲ ರೀತಿಯ ಆರೈಕೆ ಮತ್ತು ಸಹಾಯ ಒದಗಿಸುವ ಜವಾಬ್ದಾರಿಯನ್ನು ಕಂಪೆನಿಯು ವಹಿಸಿದೆ.
ಈ ದುರಂತದಲ್ಲಿ, ಅಹಮದಾಬಾದ್ನ ಬಿಜೆಪಿ ವೈದ್ಯಕೀಯ ಕಾಲೇಜು ಆವರಣದಲ್ಲಿದ್ದ ಹಲವರು ಸಂತ್ರಸ್ತರಾಗಿದ್ದು, ತೀವ್ರ ಹಾನಿಗೊಳಗಾದ ಕಾಲೇಜಿನ ಹಾಸ್ಟೆಲ್ ಕಟ್ಟಡದ ಪುನರ್ ನಿರ್ಮಾಣದಲ್ಲಿ ಸಹಕಾರ ನೀಡಲು ಟಾಟಾ ಗ್ರೂಪ್ ಮುಂದೆ ಬಂದಿದೆ. ಸತ್ತವರ ಪೈಕಿ ವೈದ್ಯರು, ವಿದ್ಯಾರ್ಥಿಗಳು ಮತ್ತು ಸ್ಥಳೀಯ ನಿವಾಸಿಗಳು ಸೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಮಾನದಲ್ಲಿ ಒಟ್ಟು 241 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಘಟನೆಯಿಂದಾಗಿ ಒಂದೇ ವ್ಯಕ್ತಿ ಮಾತ್ರ ಬದುಕುಳಿದಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ವಿಮಾನ ಪತನದ ವೇಳೆ ಏರಿಯಾದಲ್ಲಿದ್ದ ಇನ್ನು 33 ಮಂದಿ ಸ್ಥಳೀಯರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಟಾಟಾ ಗ್ರೂಪ್ ಘೋಷಿಸಿದ ₹1 ಕೋಟಿಯ ಪರಿಹಾರದ ಹೊರತಾಗಿ, ವಿಮಾನ ಪ್ರಯಾಣಿಕರ ಕುಟುಂಬಗಳಿಗೆ ವಿಮಾ ಕಂಪನಿಗಳಿಂದ ಸುಮಾರು ₹1.5 ಕೋಟಿಯ ಪರಿಹಾರವೂ ದೊರೆಯಲಿದೆ. ಕುಟುಂಬದ ಸದಸ್ಯರಿಗೆ ಉದ್ಯೋಗದ ಸೌಲಭ್ಯ ಕಲ್ಪಿಸಲು ಯಾವುದೇ ನಿರ್ಧಾರವಾಗಿದೆಯೇ ಎಂಬ ಪ್ರಶ್ನೆಗೆ, “ಈ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಪರಿಸ್ಥಿತಿಯ ಅವಲೋಕನ ನಡೆಯುತ್ತಿದೆ ಮತ್ತು ತನಿಖೆ ಮುಂದುವರಿದಿದೆ” ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.














