ನವದೆಹಲಿ: ಏರ್ ಇಂಡಿಯಾ ವಿಮಾನಗಳಲ್ಲಿ ತಾಂತ್ರಿಕ ದೋಷಗಳ ಸರಮಾಲೆಗೆ ಮತ್ತೊಂದು ಉದಾಹರಣೆ ಸೇರ್ಪಡೆಯಾಗಿದೆ. ಈ ಬಾರಿ ಸ್ಯಾನ್ ಫ್ರಾನ್ಸಿಸ್ಕೋದಿಂದ ಮುಂಬೈಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ಎಐ-180 ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಪರಿಣಾಮವಾಗಿ ವಿಮಾನವನ್ನು ಮಧ್ಯಂತರ ನಿಲ್ದಾಣವಾದ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಿ, ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.
ವಿಮಾನವು ಮುಂಜಾನೆ 12:45ರ ವೇಳೆಗೆ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಎಡ ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣದ ಕ್ರಮವಾಗಿ ಸಿಬ್ಬಂದಿ ಹಾಗೂ ಕ್ಯಾಪ್ಟನ್ ವಿಮಾನದ ತಾಂತ್ರಿಕ ಪರಿಶೀಲನೆ ಆರಂಭಿಸಿದರು. ಸುಮಾರು ನಾಲ್ಕು ಗಂಟೆಗಳ ನಿರೀಕ್ಷೆಯ ನಂತರ, ಬೆಳಗ್ಗೆ 5:20ಕ್ಕೆ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಇಳಿಯುವಂತೆ ಸೂಚನೆ ನೀಡಲಾಯಿತು.
ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಕಾರಣದಿಂದಾಗಿ, ಮುಂದಿನ ಪ್ರಯಾಣವನ್ನ ಮುಂದೂಡಲಾಗಿದೆ. ವಿಮಾನ ಪ್ರಯಾಣಿಕರ ಸುರಕ್ಷತೆಯನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಯಾವುದೇ ರೀತಿಯ ಗಾಯ ಅಥವಾ ಅಪಾಯ ಸಂಭವಿಸದಿರುವುದು ಸಂತೋಷದ ಸಂಗತಿ.
ಈ ಘಟನೆಯ ಕೆಲವು ದಿನಗಳ ಹಿಂದೆಯೇ, ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಎಐ-171 ವಿಮಾನ, ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿ 274 ಜನರ ದುರ್ಮರಣಕ್ಕೆ ಕಾರಣವಾಯಿತು. ಈ ಭೀಕರ ಘಟನೆ ಇನ್ನೂ ಜನಮನದಿಂದ ಮಾಸದೇ ಇರುವಾಗ, ಈಗ ಮತ್ತೊಂದು ತಾಂತ್ರಿಕ ದೋಷವಿರುವ ಘಟನೆ ಬಗ್ಗೆ ಮತ್ತಷ್ಟು ಆತಂಕ ಹುಟ್ಟಿಸಿದೆ.














