ಅಹಮದಾಬಾದ್ : ಏರ್ ಇಂಡಿಯಾ ವಿಮಾನ ದುರಂತದ ಹಿನ್ನೆಲೆ, ಬ್ರಿಟಿಷ್ ಹೈಕಮಿಷನ್ ಅಧಿಕಾರಿಗಳ ತಂಡ ಅಹಮದಾಬಾದ್‌ಗೆ ಆಗಮಿಸಿದ್ದು, ಮೃತ ಬ್ರಿಟಿಷ್ ನಾಗರಿಕರ ಮಾಹಿತಿ ಸಂಗ್ರಹ ಹಾಗೂ ಸಂಬಂಧಿತ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುತ್ತಿದೆ.
ಗುರುವಾರದಂದು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳಬೇಕಾಗಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನ, ಹಾರಾಟಕ್ಕೆ ಕೆಲವೇ ನಿಮಿಷಗಳೊಳಗೆ ತೀವ್ರ ತಾಂತ್ರಿಕ ದೋಷದಿಂದಾಗಿ ಪತನಗೊಂಡಿತ್ತು. ಈ ಭೀಕರ ದುರಂತದಲ್ಲಿ 265 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಇದರಲ್ಲಿ 53 ಮಂದಿ ಬ್ರಿಟಿಷ್ ಪ್ರಜೆಗಳು ಇದ್ದರು ಎಂದು ಪ್ರಾಥಮಿಕ ಮಾಹಿತಿ ಬಹಿರಂಗವಾಗಿದೆ.
ಈ ದುರಂತಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಬ್ರಿಟನ್, ಭಾರತದಲ್ಲಿನ ಹೈಕಮಿಷನ್ ಮುಖಾಂತರ ಹಿರಿಯ ಅಧಿಕಾರಿಗಳ ತಂಡವನ್ನು ಅಹಮದಾಬಾದ್‌ಗೆ ಕಳಿಸಿದೆ. ಈ ತಂಡವು, ಘಟನಾ ಸ್ಥಳಕ್ಕೆ ಭೇಟಿ ನೀಡಿ, ಬ್ರಿಟಿಷ್ ಮೃತರು ಹಾಗೂ ಗಾಯಾಳುಗಳ ಬಗ್ಗೆ ವಿವರ ಸಂಗ್ರಹಿಸುತ್ತಿದೆ.















