ಅಹಮದಾಬಾದ್: ಗುಜರಾತಿನ ಅಹಮದಾಬಾದ್‌ನಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದ್ದು, 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಟೇಕ್‌ಆಫ್ ಆದ ತಕ್ಷಣವೇ ಪತನಗೊಂಡಿದೆ. ದಟ್ಟ ಹೊಗೆ ಹಾಗೂ ಬೆಂಕಿಯ ಜ್ವಾಲೆಗಳಿಂದ ವಿಮಾನ ನಿಲ್ದಾಣದ ಆವರಣ ತೀವ್ರವಾದ ಪರಿಸ್ಥಿತಿಗೆ ಒಳಗಾಗಿದೆ.
ಈ ಘಟನೆ ಇಂದು ಮಧ್ಯಾಹ್ನದ ಅಹಮದಾಬಾದ್‌ನ ಮೇಘನಿ ನಗರ ಪ್ರದೇಶದಲ್ಲಿ ನಡೆಯಿತು. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಡುತ್ತಿದ್ದ ಬೋಯಿಂಗ್ 787 ಡ್ರೀಮ್‌ಲೈನರ್ ಮಾದರಿಯ ಏರ್ ಇಂಡಿಯಾ ವಿಮಾನವು ಏರಿದ ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ತಪ್ಪಿ ಪತನವಾಯಿತು. ಹಲವಾರು ಸಾವುನೋವುಗಳ ಭೀತಿ ಎದುರಾಗಿದೆ. ಆದರೆ, ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬುದರ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಹಲವಾರು ಜನರು ಗಾಯಗೊಂಡಿರುವ ಸಾಧ್ಯತೆ ಇದೆ. ಆದರೆ, ಸಾವಿನ ಪ್ರಮಾಣದ ಬಗ್ಗೆ ನಿಖರ ಮಾಹಿತಿ ನಿರೀಕ್ಷೆಯಲ್ಲಿದೆ. ಸ್ಥಳದಲ್ಲಿ ತುರ್ತು ಸೇವಾ ಸಿಬ್ಬಂದಿ, ಅಗ್ನಿಶಾಮಕ ದಳ, ಪೊಲೀಸ್ ಹಾಗೂ ವೈದ್ಯಕೀಯ ತಂಡಗಳು ತಕ್ಷಣ ಕಾರ್ಯಪ್ರವೃತ್ತವಾಗಿವೆ.
ಅಪಘಾತದ ಸಂದರ್ಭದಲ್ಲೇ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಲಂಡನ್‌ನಲ್ಲಿ ವಾಸಿಸುವ ತಮ್ಮ ಮಗಳನ್ನು ಭೇಟಿಸಲು ಅವರು ಪ್ರಯಾಣಿಸುತ್ತಿದ್ದರು.














