ಮನೆ ಅಪರಾಧ ವೈದ್ಯ ದಂಪತಿಗೆ ಸೆಕೆಂಡ್‌ ಹ್ಯಾಂಡ್‌ ಕಾರು ಕೊಡಿಸುವುದಾಗಿ 6.2 ಕೋಟಿ ವಂಚಿಸಿದ್ದ ಐಶ್ವರ್ಯ

ವೈದ್ಯ ದಂಪತಿಗೆ ಸೆಕೆಂಡ್‌ ಹ್ಯಾಂಡ್‌ ಕಾರು ಕೊಡಿಸುವುದಾಗಿ 6.2 ಕೋಟಿ ವಂಚಿಸಿದ್ದ ಐಶ್ವರ್ಯ

0

ಬೆಂಗಳೂರು: ಮಾಜಿ ಸಂಸದ ಡಿ.ಕೆ. ಸುರೇಶ್‌ ಸಹೋದರಿ ಎಂದು ನಂಬಿಸಿ 8.41 ಕೋಟಿ ರೂ. ಮೌಲ್ಯದ 14.6 ಕೆ.ಜಿ.ಚಿನ್ನಾಭರಣ ಸಾಲ ಪಡೆದ ವಂಚನೆ ಆರೋಪ ಪ್ರಕರಣದ ಆರೋಪಿ ಐಶ್ವರ್ಯ ಗೌಡ ಈ ಹಿಂದೆಯೂ ಕೋಟ್ಯಂತರ ರೂ. ವಂಚಿಸಿದ್ದಳು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Join Our Whatsapp Group

ವೈದ್ಯ ದಂಪತಿಗೆ ಸೆಕೆಂಡ್‌ ಹ್ಯಾಂಡ್‌ ಕಾರು ಕೊಡಿಸುವುದಾಗಿ 6.2 ಕೋಟಿ ರೂ. ಪಡೆದು ವಂಚಿಸಿದ ಆರೋಪದಡಿ ಐಶ್ವರ್ಯ ಗೌಡ ವಿರುದ್ಧ ಕಳೆದ ಫೆಬ್ರವರಿಯಲ್ಲಿ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಸದ್ಯ ಈ ಪ್ರಕರಣದ ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ ಎಂದು ತಿಳಿದು ಬಂದಿದೆ.

ಏನಿದು ವಂಚನೆ ಪ್ರಕರಣ?

ದೂರುದಾರ ವಿಜಯನಗರ ನಿವಾಸಿ ಡಾ.ಗಿರೀಶ್‌ ಮತ್ತು ಅವರ ಪತ್ನಿ ಡಾ.ಮಂಜುಳಾ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. 2022ನೇ ಸಾಲಿನಲ್ಲಿ ಐಶ್ವರ್ಯಗೌಡ ಕಾಸ್ಮಿಟಿಕ್‌ ಸರ್ಜರಿ ಮಾಡಿಸಲು ಆಸ್ಪತ್ರೆಗೆ ಬಂದಾಗ ಡಾ.ಗಿರೀಶ್‌ ದಂಪತಿಗೆ ಪರಿಚಿತರಾಗಿದ್ದಾರೆ. ಈ ವೇಳೆ ನಾನು ರಿಯಲ್‌ ಎಸ್ಟೇಟ್‌, ಫೈನಾನ್ಸ್‌ ವ್ಯವಹಾರ ಮಾಡುತ್ತಿದ್ದೇನೆ. ಜತೆಗೆ ಐಷಾರಾಮಿ ಸೆಕೆಂಡ್‌ ಹ್ಯಾಂಡ್‌ ಕಾರುಗಳ ವ್ಯವಹಾರ ಸಹ ಮಾಡುತ್ತಿದ್ದೇನೆ ಎಂದು ಐಶ್ವರ್ಯ ಗೌಡ ಹೇಳಿಕೊಂಡಿದ್ದಾಳೆ.

ಆಗ ವೈದ್ಯ ದಂಪತಿ ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸಬೇಕೆಂದು ಕೊಂಡಿದ್ದೇವೆ ಎಂದು ಈಕೆ ಬಳಿ ಹೇಳಿಕೊಂಡಿದ್ದಾರೆ. ಈ ವೇಳೆ ಕಡಿಮೆ ಬೆಲೆಗೆ ಸೆಕೆಂಡ್‌ ಹ್ಯಾಂಡ್‌ ಐಷಾರಾಮಿ ಕಾರು ಕೊಡಿಸುವುದಾಗಿ ಆರೋಪಿತೆ ಆನ್‌ಲೈನ್‌ ಮೂಲಕ 2.75 ಕೋಟಿ ರೂ. ಮತ್ತು 3.25 ಕೋಟಿ ರೂ. ನಗದು ಪಡೆದುಕೊಂಡಿದ್ದಾಳೆ. ಬಳಿಕ ಕಾರು ಕೊಡಿಸದೆ ವಂಚಿಸಿದ್ದಾಳೆ ಎಂದು ದೂರು ದಾಖಲಾಗಿದೆ.

ದಂಪತಿ ಹಣ ವಾಪಸ್‌ ಕೇಳಿದ್ದಕ್ಕೆ ಪ್ರಾಣ ಬೆದರಿಕೆ

ಹಣ ವಾಪಸ್‌ ಕೇಳಿದ್ದಕ್ಕೆ ವೈದ್ಯ ದಂಪತಿಗೆ ಐಶ್ವರ್ಯ ಗೌಡ ಪ್ರಾಣ ಬೆದರಿಕೆ ಹಾಕಿದ್ದಾಳೆ. ಜತೆಗೆ ಹಣ ಕೇಳಿದರೆ, ನಿಮ್ಮ ವಿರುದ್ಧ ಅತ್ಯಾಚಾರದ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆ. ಈ ವಿಷಯವನ್ನು ಇಲ್ಲಿಗೆ ಬಿಡಬೇಕಾದರೆ, 5 ಲಕ್ಷ ರೂ. ಕೊಡಬೇಕು ಎಂದು ಬೇಡಿಕೆ ಇರಿಸಿ, ಡಾ.ಗಿರೀಶ್‌ ಅವರಿಂದ 2 ಲಕ್ಷ ರೂ. ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ವೈದ್ಯ ಗಿರೀಶ್‌ ದೂರು ನೀಡಿದ್ದರು. ಆದರೆ, ಹೈಕೋರ್ಟ್‌ ತನಿಖೆಗೆ ತಡೆಯಾಜ್ಞೆ ನೀಡಿದೆ.