ಮಂಡ್ಯ: ಡಾ. ಜೀಶಂಪ ಸಾಹಿತ್ಯ ವೇದಿಕೆ ಹಾಗೂ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂ ವತಿಯಿಂದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ೧೨ನೇ ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಹಾಗೂ ಸಾಹಿತಿ ಎಸ್. ಕೃಷ್ಣ ಸ್ವರ್ಣಸಂದ್ರ ಅವರ ನೇಗಿಲಧರ್ಮ ಕೃತಿ ಬಿಡುಗಡೆ ಸಮಾರಂಭವನ್ನು ಜೂನ್ ೧ರಂದು ಬೆಳಿಗ್ಗೆ ೧೦.೩೦ಕ್ಕೆ ನಗರದ ಕರ್ನಾಟಕ ಸಂಘದ ಆವರಣದಲ್ಲಿರುವ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
೧೨ನೇ ಕನ್ನಡ ಅಕ್ಷರ ಜಾತ್ರೆ ಸಮ್ಮೇಳನಾಧ್ಯಕ್ಷತೆಯನ್ನು ಸಾಹಿತಿ, ಚಿಂತಕ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಡಿ.ಎಸ್. ವೀರಯ್ಯ ವಹಿಸಲಿದ್ದು, ಸಮಾರಂಭವನ್ನು ಮೈಸೂರು ವಿವಿಯ ಮಾಜಿ ಸಿಂಡಿಕೇಟ್ ಸದಸ್ಯರಾದ ಡಾ. ಈ.ಸಿ. ನಿಂಗರಾಜೇಗೌಡ ನೆರವೇರಿಸಲಿದ್ದು, ಸಾಹಿತಿ ಹಾಗೂ ವೈದ್ಯ ಡಾ. ಚಂದ್ರಶೇಖರ್ ಪ್ರಧಾನ ಭಾಷಣ ಮಾಡಲಿದ್ದಾರೆ. ನೇಗಿಲ ಧರ್ಮ ಕೃತಿಯನ್ನು ಕಿತ್ತೂರು ರಾಣಿ ಚನ್ನಮ್ಮ ವಿವಿಯ ಪ್ರಾಧ್ಯಾಪಕ ಡಾ. ಹೆಚ್.ಟಿ. ಪೋತೆ, ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಆರ್. ಭರಣಿ ಹರೀಶ್, ಡಾ. ಹೆಚ್.ಎಂ. ನಾಗೇಶ್, ಎಂ. ಬಾಬು, ಸುಖಾನಂದ ಶೆಟ್ಟಿ, ಶಿವಲಿಂಗಯ್ಯ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ, ಡಾ. ಸುಂದ್ರಪ್ಪ ಲಿಂಗಪಟ್ಟಣ, ಎಚ್.ಟಿ. ಪಾರ್ವತಮ್ಮ, ಸಿರಿಗಂಧ ರಾಮಕೃಷ್ಣ, ಎಸ್. ಶ್ರೀಧರ್ ಹೆಗಡೆ, ರಾಮಕೃಷ್ಣಯ್ಯ, ಕೆ.ಎನ್. ರಾಮು ಅವರಿಗೆ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇದಾದ ನಂತರ ಮಧ್ಯಾಹ್ನ ೨.೩೦ಕ್ಕೆ ಕವಿಕಾವ್ಯ ಮೇಳ ನಡೆಯಲಿದ್ದು, ನಾಡಿನ ಅನೇಕ ಕವಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಡಾ. ಜೀ.ಶಂ.ಪ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಸ್. ಕೃಷ್ಣಸ್ವರ್ಣಸಂದ್ರ ತಿಳಿಸಿದ್ದಾರೆ.
ಸಮ್ಮೇಳನಾಧ್ಯಕ್ಷ ಡಿ.ಎಸ್.ವೀರಯ್ಯ ಸಂಕ್ಷಿಪ್ತ ಪರಿಚಯ: ಡಿ.ಎಸ್. ವೀರಯ್ಯ ಅವರು ಹುಟ್ಟೂರಿನ ಕಾಡುಕೊತ್ತನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಆರಂಭಿಸಿ, ನಂತರ ಮೈಸೂರಿನಲ್ಲಿ ಪದವಿ ಶಿಕ್ಷಣ ಪಡೆದು, ಕೋಲಾರದಲ್ಲಿ ರಾಜಕಾರಣ ಆರಂಭಿಸಿ, ಎರಡು ಬಾರಿ ಬಿಜೆಪಿಯಿಂದ ಸಂಸತ್ ಚುನಾವಣೆಗೆ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತ ಅವರು, ಬಳಿಕ ವಿಧಾನಪರಿಷತ್‌ಗೆ ಸತತ ಎರಡು ಬಾರಿ ಆಯ್ಕೆಗೊಂಡು ಆರು ವರ್ಷ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ದೇವರಾಜ ಅರಸ್ ಟಕ್ ಟರ್ಮಿನಲ್ ಅಧ್ಯಕ್ಷರಾಗಿಯೂ ಸಹ ಕಾರ್ಯನಿರ್ವಹಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಅವರು, ನಿರೀಕ್ಷೆ, ಗೆರೆಗಳು, ಬೇರುಗಳು ಎಂಬ ಮೂರು ಕವನ ಸಂಕಲನವನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಅಲ್ಲದೆ ದೇವರು ಎತ್ತವರು ಕಥೆ ಪದವಿ ತರಗತಿಗೆ ಪಠ್ಯವಾಗಿದೆ. ಕೂದಲುಸ್ವಾಮಿ ಮತ್ತು ಇತರ ಕಥೆಗಳು, ಕಥಾ ಸಂಕಲನ, ದಲಿತ ಚಿಂತನೆಗಳು, ಅಂಬೇಡ್ಕರ್ ಸಂದೇಶಗಳು, ಸಮಾಜಮುಖಿ, ಸಾಹಿತ್ಯಮುಖಿ, ಒಂದಾಗಿ ಮುಂದಾಗಿ, ವೈಚಾರಿಕ ಲೇಖನಗಳ ಸಂಕಲನ, ವಿಧಾನಮಂಡಲದಲ್ಲಿ ವೀರಯ್ಯ ಮತ್ತಿತರ ಕೃತಿಗಳನ್ನು ರಚಿಸಿದ್ದಾರೆ.















