ಕೇರಳ: ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಧಗ ಧಗನೆ ಹೊತ್ತಿ ಉರಿದಿರುವ ಘಟನೆ ಕಣ್ಣೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ತಡರಾತ್ರಿ 1.25ಕ್ಕೆ ಈ ಅವಘಡ ಸಂಭವಿಸಿದ್ದು, ಅಪಘಾತ ಸಂಭವಿಸಿದಾಗ ರೈಲು ನಿಲ್ದಾಣದ ಮೂರನೇ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿತ್ತು. ಮಾಹಿತಿ ಪಡೆದ ಅಗ್ನಿಶಾಮಕ ದಳದ ವಾಹನಗಳು ಕೂಡಲೇ ಸ್ಥಳಕ್ಕೆ ತೆರಳಿದವು. ಮೂರು ಅಗ್ನಿಶಾಮಕ ದಳದ ತಂಡಗಳು ಬೆಂಕಿ ನಂದಿಸಲು ಗಂಟೆಗಳ ಕಾಲ ಪ್ರಯತ್ನಿಸಿದರೂ ಕೋಚ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಸ್ವಲ್ಪ ಸಮಯದ ನಂತರ ಬೆಂಕಿ ಹತೋಟಿಗೆ ತರಲಾಯಿತು.
ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಘಟನೆಯ ಕುರಿತು ರೈಲ್ವೇ ಇಲಾಖೆ ತನಿಖೆಗೆ ಆದೇಶಿಸಿದ್ದು, ಬೆಂಕಿಗೆ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ.
ರೈಲಿನ ಇತರ ಭಾಗಗಳಿಗೆ ಬೆಂಕಿ ಹರಡುವುದನ್ನು ತಡೆಯಲು, ಅಧಿಕಾರಿಗಳು ಇತರ ಬೋಗಿಗಳನ್ನು ಪ್ರತ್ಯೇಕಿಸಲು ನಿರ್ಧರಿಸಿದರು. ಈ ಕ್ರಮದಿಂದ ಇಡೀ ರೈಲು ಬೆಂಕಿಗೆ ಆಹುತಿಯಾಗಿಲ್ಲ. ರೈಲು ಬೆಳಗ್ಗೆ 5.10ಕ್ಕೆ ಹೊರಡಬೇಕಿತ್ತು.
ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಘಟನೆಯ ಮೊದಲು ಅಪರಿಚಿತ ವ್ಯಕ್ತಿಯೊಬ್ಬರು ಕ್ಯಾನ್ ನೊಂದಿಗೆ ರೈಲಿಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಆದರೆ, ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ.