ಮನೆ ಮಾನಸಿಕ ಆರೋಗ್ಯ ಮದ್ಯಪಾನ ಮತ್ತು ಮಾದಕ ವಸ್ತುಗಳ ಚಟ: ಪರಿಹಾರ

ಮದ್ಯಪಾನ ಮತ್ತು ಮಾದಕ ವಸ್ತುಗಳ ಚಟ: ಪರಿಹಾರ

0

         ನಾವು ಪ್ರತಿಯೊಬ್ಬರೂ ಸಂತೋಷವಾಗಿರಲು ಇಷ್ಟಪಡುತ್ತೇವೆ. ಸಂತೋಷ ಪಡಲು ಹಾಗೂ ಆ ಸಂತೋಷವನ್ನು ಬಹಳ ಕಾಲ ಉಳಿಸಿಕೊಳ್ಳಲು ಸಾಧ್ಯವಾದ ಪ್ರಯತ್ನಗಳನ್ನೆಲ್ಲಾ ಮಾಡುತ್ತೇವೆ. ಈ ರೀತಿ, ಸಂತೋಷವನ್ನು ಅರಸುವ ನಮ್ಮ ನಡೆವಳಿಕೆ ಹುಟ್ಟಿದಂದಿನಿಂದಲೇ ಕಂಡುಬರುತ್ತದೆ ಎಂದಿದ್ದಾನೆ ಪ್ರಸಿದ್ಧ ಮನೋ ವಿಜ್ಞಾನಿ ಸಿಗ್ನಂಡ್ ಫ್ರಾಯ್ಡ್ ಅನಾದಿಕಾಲದಿಂದ ಮಾನವ, ಅತ್ಯಲ್ಪ ಪ್ರಯತ್ನದಿಂದ ಅತಿಹೆಚ್ಚು ಖುಷಿಯನ್ನು ಅನುಭವಿಸುವ ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದಾನೆ. ತನ್ನ ನೋವು ನಿರಾಶೆಗಳನ್ನು, ಸಮಸ್ಯೆ ವಿಫಲತೆಗಳನ್ನು ಮರೆಯುವ ಮಾರ್ಗಕ್ಕಾಗಿ ಹುಡುಕಾಟ ನಡೆಸಿದ್ದಾನೆ. ತನಗೆ ಹೊಸ ಬಗೆಯ ಸುಖ ಕೊಡುವ, ಹೊಸ ಹಾಗೂ ರೋಮಾಂಚಕಾರಿ ಅನುಭವಗಳಿಗಾಗಿ ಹಾತೊರೆಯುತ್ತಿದ್ದಾನೆ. ಈ ದಿಸೆಯಲ್ಲಿ ಮದ್ಯ, ಅಫೀಮು ಮುಂತಾದ ಹಲವು ಮಾದಕ ಪದಾರ್ಥಗಳ ಸೇವನೆಯಿಂದ ಖುಷಿಪಡುವ ವಿಫಲ ಪ್ರಯತ್ನ ಮಾಡಿದ್ದಾನೆ. ಇವುಗಳಿಂದ ನಲಿವಿಗಿಂತ ಹೆಚ್ಚಾಗಿ ನೋವನ್ನೇ ಉಂಡಿದ್ದಾನೆ.

Join Our Whatsapp Group

       ರಾಮಸ್ವಾಮಿ ಒಂದು ಸಂಸ್ಥೆಯ ಮ್ಯಾನೇಜರ್. ಪ್ರತಿದಿನ ಸಂಜೆ ಆತ ಬಾರ್‌ಗೆ ಭೇಟಿ ಇತ್ತು ತನ್ನ ಮೆಚ್ಚಿನ ಬ್ರಾಂಡ್ ಮದ್ಯವನ್ನು ಸೇವಿಸುತ್ತಾನೆ. ಹೀಗೆ ಎರಡು ಮೂರು ಪೆಗ್ ಮದ್ಯ ಕುಡಿದರೆ, ತನ್ನ ದಿನದ ಆಯಾಸವೆಲ್ಲಾ ಓಡಿಹೋಗಿಬಿಡುತ್ತದೆ. ಮನಸ್ಸು ಹಕ್ಕಿಯಂತೆ ಹಗುರವಾಗಿ, ಉತ್ಸಾಹದಿಂದ ಮನೆ ತಲುಪಬಹುದು, ಚೆನ್ನಾಗಿ ಹಸಿವೂ ಆಗಿ ಊಟ ರುಚಿಸುತ್ತೆ ಎನ್ನುತ್ತಾನೆ.

    ಗೋಪಾಲ ಕಾರ್ಖಾನೆಯೊಂದರಲ್ಲಿ ಕಾರ್ಮಿಕ ಬೆವರು ಹರಿಸಿ ದುಡಿಯು ತ್ತಾನೆ. ಸಾಯಂಕಾಲವಾಗುತ್ತಿದ್ದಂತೆ ಆಯಾಸದಿಂದ ಸುಸ್ತಾಗಿಬಿಡುತ್ತಾನೆ. ಪ್ರಾಣವೇ ಇಲ್ಲದಂತಾಗುತ್ತದೆ ಎನ್ನುತ್ತಾನೆ. ಕೆಲಸ ಮುಗಿಯುತ್ತಿದ್ದಂತೆ ಸಾರಾಯಿ ಅಂಗಡಿಗೆ ಧಾವಿಸುತ್ತಾನೆ. ಒಂದು ಶೀಸೆ ಸಾರಾಯಿ ಕುಡಿದಾಗಲೇ ಆತನಿಗೆ ಮರಳಿ ಜೀವ ಬಂದಂತಾಗುತ್ತದೆ. ಇನ್ನೊಂದು ಶೀಸೆಯನ್ನು ಮನೆಗೆ ಕೊಂಡೊಯ್ದು, ಮಲಗುವ ಮುನ್ನ ಕುಡಿದು ಮುಗಿಸುತ್ತಾನೆ. ನಂತರ ಗಡದ್ದು ಮಲಗಿದವನು ಬೆಳಿಗ್ಗೆ ಎದ್ದಾಗ ಉತ್ಸಾಹದಿಂದ ಕೆಲಸಕ್ಕೆ ಸಜ್ಜಾಗುತ್ತಾನೆ. ಸಾರಾಯಿಯೇ ತನ್ನ ರಕ್ಷಕ ಎನ್ನುತ್ತಾನೆ. ಆದಿಲ್ಲದೆ ನಿದ್ರೆ ಬರದು, ಸುಸ್ತು ಹೋಗದು, ಮೈಕೈ ನೋವು ನಿಲ್ಲದು ಎನ್ನುತ್ತಾನೆ.

     ವೇಲನ್ ಕೂಲಿ ಮಾಡಿ ಹೊಟ್ಟೆ ಹೊರೆಯುತ್ತಾನೆ. ದಿನಕ್ಕೆ ನೂರು ರೂಪಾಯಿ ಸಂಪಾದಿಸಲು ಬೆಳಿಗ್ಗೆ ಏಳು ಘಂಟೆಯಿಂದ ಸಂಜೆ ಏಳು ಘಂಟೆಯ ವರೆಗೆ ಬಿಸಿಲು ಗಾಳಿ ಎನ್ನದೆ ಮೈ ಮುರಿದು ದುಡಿಯಬೇಕು. ಕೆಲಸದ ನಡುವೆ ಊಟ ತಿಂಡಿಗೆಂದು ಮೂವತ್ತು ರೂಪಾಯಿ ಖರ್ಚು ಮಾಡುತ್ತಾನೆ. ದಿನದ ಕೆಲಸ ಮುಗಿದು ಕೂಲಿ ಕೈಗೆ ಬಂದಕೂಡಲೇ, ತಾನಿರುವ ಕೊಳಗೇರಿಯ ಮೂಲೆ ಯಲ್ಲಿರುವ ಗುಡಿಸಲು ಕಡೆಗೆ ದಾಪುಗಾಲು ಹಾಕುತ್ತಾನೆ. ಅಲ್ಲಿ ಕಡಿಮೆ ಬೆಲೆಗೆ, ಹುಳಿ ಹೆಂಡ ಸಿಗುತ್ತದೆ ಕಂಠಪೂರ್ತಿ ಕುಡಿಯುತ್ತಾನೆ. ಜೇಬು ಬರಿದಾದ ಮೇಲೆ ಎದ್ದು ಮನೆಯತ್ತ ನಿಧಾನವಾಗಿ ಹೆಜ್ಜೆ ಹಾಕುತ್ತಾನೆ. ಅನೇಕ ಸಾರಿ ಅವನಿಗೆ ನಿಶೆಯಿಂದ ನೇರವಾಗಿ ನಡೆಯಲಾಗದೆ, ತೂರಾಡುತ್ತಾನೆ. ಕಣ್ಣು ಮಂಜಾಗಿ, ತಲೆ ಭಾರವೆನಿಸು ತ್ತದೆ. ಆದರೆ ಮನಸ್ಸಿಗೆ ಖುಷಿ, ಕಲಿತ ಪದಗಳನ್ನು ಗಟ್ಟಿಯಾಗಿ ಹಾಡುತ್ತಾನೆ. ಅವನನ್ನು ಈ ಸ್ಥಿತಿಯಲ್ಲಿ ಕಂಡ ಅವನ ಹೆಂಡತಿ, ‘ದುಡಿದದ್ದೆನ್ನೆಲ್ಲಾ ಕುಡಿದು ಹಾಳು ಮಾಡುತ್ತೀಯಾ’ ಎಂದು ಕೂಗಾಡುತ್ತಾಳೆ. ಇವನು ‘ಅದು ನನ್ನಿಷ್ಟ ನೀನ್ಯಾರು ಕೇಳಲು’ ಎಂದು ಕಿರುಚುತ್ತಾನೆ. ಮನೆಯಲ್ಲಿ ತಿನ್ನಲು ಏನೂ ಇರದಿದ್ದನ್ನು ಕಂಡು, ಅವಳನ್ನು ಹೊಡೆಯುತ್ತಾನೆ. ಆಮೇಲೆ ಮಂಪರು ಬಂದು, ಒಂದು ಮೂಲೆಯಲ್ಲಿ ಮುದುರಿ ಮಲಗಿ, ಗೊರಕೆ ಹೊಡೆಯುತ್ತಾನೆ.

      ಸುಂದರ್ ಮತ್ತು ಅವನ ಸ್ನೇಹಿತರು ತಮ್ಮನ್ನು ಸಾಹಸ ಪ್ರಿಯರು ಎಂದು ಕರೆದುಕೊಳ್ಳುತ್ತಾರೆ. ಕಾಲೇಜು ಅವರ ಪಾಲಿಗೆ ಒಂದು ದೊಡ್ಡ ‘ಬೋರ್’. ಈಗಿನ ವಿದ್ಯಾಭ್ಯಾಸಕ್ಕೆ ಯಾವೊಂದು ಅರ್ಥವೂ ಇಲ್ಲ. ತಾವು ಸೇರಿರುವ ಕೋರ್ಸ್ ಮುಗಿದು ತಮಗೆ ಸಿಗುವ ಪದವಿಗೆ ಯಾವ ಬೆಲೆಯೂ ಇಲ್ಲ ಎಂದು ವಾದಿಸುತ್ತಾರೆ. ಹಾಗೆಯೇ ನಂಬಿದ್ದಾರೆ. ತಮಗೆ ಡಿಗ್ರಿ ಸಿಗಲಿ, ಸಿಗದಿರಲಿ ನಿರುದ್ಯೋಗ ಕಟ್ಟಿಟ್ಟ ಬುತ್ತಿ ಎಂದು ತಿಳಿದಿದ್ದಾರೆ. ಜೀವನೋಪಾಯಕ್ಕೇನು ಮಾಡುವುದು ಎಂದು ಪ್ರಶ್ನಿಸುತ್ತಾರೆ. ಅವರಿಗೆ ಭಯಂಕರ ಬೇಸರ. ಈ ಬೇಸರವನ್ನು ಕಳೆಯಲು, ಒಟ್ಟಿಗೆ ಒಂದೆಡೆ ಕುಳಿತು ಗಾಂಜಾ ಸೇದುತ್ತಾರೆ. ಗಾಂಜಾ ಸೇದುವುದು ಒಂದು ರೋಮಾಂಚಕ ಅನುಭವ ಎನ್ನುತ್ತಾನೆ ಸುಂದರ್. ‘ಒಂದು ದಮ್ಮು ಎಳೆಯುವುದೇ ತಡ ನನ್ನ

      ಬೇಸರ ಮಾಯವಾಗಿ ಬಿಡುತ್ತದೆ. ಆಗ ನಾನು ಗಾಳಿಯಲ್ಲಿ ತೇಲುತ್ತೇನೆ. ಸುತ್ತಲಿನ ವಸ್ತುಗಳೆಲ್ಲಾ ಬಣ್ಣ ಬಣ್ಣವಾಗಿ ಆಕರ್ಷಕವಾಗುತ್ತವೆ. ಮೈಯಲ್ಲೆಲ್ಲಾ ಮಿಂಚು ಹರಿದಂತೆ ಆಗಿ ಪುಳಕವಾಗುತ್ತದೆ. ಅದರ ಮಜವೇ ಮಜ. ಕೆಲವು ಸಾರಿ, ನೂರಾರು ಕಾಮನಬಿಲ್ಲುಗಳು ಒಟ್ಟಿಗೆ ಸೇರಿದಂತೆ ಬೆಳಕಿನ ಕಿರಣಗಳು ನರ್ತಿಸುವಂತೆ ತೋರುತ್ತದೆ’ ಎಂದು ತನ್ನ ಅನುಭವವನ್ನು ವಿವರಿಸುತ್ತಾನೆ.

     ಮಾದಕ ವಸ್ತುಗಳನ್ನು ಸೇವಿಸಿ, ಅದರಿಂದ ಖುಷಿ ಸಿಗುತ್ತದೆ, ಮನಸ್ಸಿನ ಬೇಸರ, ಕಷ್ಟಕಾರ್ಪಣ್ಯಗಳು ಮರೆಯಾಗುತ್ತವೆ ಎನ್ನುವವರ ಕೆಲವು ಉದಾಹರಣೆ ಗಳಿವು. ಇದು ಎಷ್ಟರ ಮಟ್ಟಿಗೆ ನಿಜ? ಉಪಯೋಗಿಸಲು ಈ ವಸ್ತುಗಳು ಎಷ್ಟು ಸುರಕ್ಷಿತ? ಇವುಗಳಿಂದ ವ್ಯಕ್ತಿಗೆ ಹಾಗೂ ಸಂಬಂಧ ಪಟ್ಟವರಿಗೆ ಆಗುವ ತೊಂದರೆ ಹಾನಿ ಎಷ್ಟು? ಏಕೆ, ಅನೇಕರು ಈ ಮಾದಕತೀನಿ ವಸ್ತುಗಳ ಸೇವನೆಯ ಚಟ ಬೆಳೆಸಿ ಕೊಂಡು, ತಮ್ಮನ್ನು ಮತ್ತು ತಮ್ಮ ಮನೆಯವರನ್ನು ನಾಶಮಾಡುತ್ತಾರೆ? ಈ ಚಟಕ್ಕೆ ಚಿಕಿತ್ಸೆ ಇದೆಯೇ? ಜನ ಈ ಚಟಕ್ಕೆ ಬೀಳದಂತೆ ಮಾಡುವ ನಿವಾರಣಾಕ್ರಮ ಇದೆಯೇ?

 ಹೆಚ್ಚು ಬಳಕೆಯಲ್ಲಿರುವ ಜನಪ್ರಿಯ ಮಾದಕ ಪದಾರ್ಥಗಳು

      ಜನರು ಒಂದು ಮಾದಕ ಪದಾರ್ಥವನ್ನು, ಇಷ್ಟಪಟ್ಟು ಹೆಚ್ಚಾಗಿ ಬಳಸಲು ಅನೇಕ ಕಾರಣಗಳಿವೆ. ಪದಾರ್ಥ ಸುಲಭವಾಗಿ ದೊರೆಯುತ್ತದೆಯೇ, ಅಗ್ಗದ ಬೆಲೆಗೆ ಸಿಗುತ್ತದೆಯೇ, ಸೇವನೆಯ ರೀತಿ, ಪ್ರಾರಂಭದಲ್ಲಿ ಅದು ಕೊಡುವ ಅನುಭವ, ಖುಷಿ, ಬೇಡದ ಅಡ್ಡ ಪರಿಣಾಮಗಳು ಇತ್ಯಾದಿ ಅಂಶಗಳು ಆ ಪದಾರ್ಥದ ಜನಪ್ರಿಯತೆ ಯನ್ನು ನಿರ್ಧರಿಸುತ್ತವೆ. ನಮ್ಮ ದೇಶದಲ್ಲಿ ಹೆಚ್ಚು ಬಳಕೆಯಲ್ಲಿರುವ ಮಾದಕ ಪದಾರ್ಥಗಳೆಂದರೆ,

1. ವಿವಿಧ ಬಗೆಯ ಮದ್ಯಗಳು : ಸಾರಾಯಿ , ಬೀರ್, ಬ್ರಾಂದಿ, ರಮ್, ಜಿನ್, ವಿಸ್ಕಿ ಇತ್ಯಾದಿ.

2. ಗಾಂಜಾ, ಭಂಗಿ, ಚರಸ್, ಹಶೀಶ್, ಗ್ರಾಸ್.

3. ಅಫೀಮು, ಮಾರ್ಫಿನ್, ಪೆಥಿಡಿನ್, ಹೆರಾಯಿನ್, ಬ್ರೌನ್ ಶುಗರ್,

4. ನಿದ್ರೆ ದೂರಾಗಿಸುವ ಡೆಕ್ಸಿಡ್ರಿನ್ ಮಾತ್ರೆ, ಅರಿವಳಿಸುವ ಕೋಕೇನ್.

5. ಎಲ್.ಎಸ್.ಡಿ. ಕೊಕೇನ್

6.ಇತರೆ ಔಷಧಗಳು : ನಿದ್ರಾ ಗುಳಿಗೆಗಳು, ಸಮಾಧಾನಕಾರಕ ಮಾತ್ರೆ ಗಳು, ನೋವು ನಿವಾರಕ ಇಂಜೆಕ್ಷನ್‌ಗಳು, ಮಾತ್ರೆಗಳು.

7.ಕ್ಷೀರಾಕ್ಸ್ ಇಂಕ್, ಉಗುರಿನ ಬಣ್ಣವನ್ನು ತೆಗೆಯುವ ದ್ರವ, ಉಗುರಿಗೆ ಹೊಳಪು ಕೊಡುವ ದ್ರವ, ಐಯೋಡೆಕ್ಸ್, ಅಣಬೆಗಳು.

 ಮದ್ಯಪಾನ/ಮಾದಕವಸ್ತುಗಳ ಬಗ್ಗೆ ನಮ್ಮಲ್ಲಿರುವ ಜನಪ್ರಿಯ ತಪ್ಪು ನಂಬಿಕೆಗಳು: 

ಮದ್ಯಪಾನವನ್ನು ಜನ ಏತಕ್ಕೆ ಇಷ್ಟಪಡುತ್ತಾರೆ. ಏಕೆ ಅದರ ಮೇಲೆ

ಅವಲಂಬನೆ ಬೆಳೆಸಿಕೊಳ್ಳುತ್ತಾರೆ. ಅದರ ಅಲ್ಪಕಾಲಿಕ ಹಾಗೂ ದೀರ್ಘ ಕಾಲಿಕ ಉಷ್ಪರಿಣಾಮಗಳೇನು ಎಂದು ವಿಶ್ಲೇಷಿಸುವುದರ ಮೊದಲು, ಮದ್ಯಸಾರದ ಬಗ್ಗೆ ಜನರಲ್ಲಿ ಕಂಡುಬರುವ ಸಾಮಾನ್ಯ ನಂಬಿಕೆ, ನಿರೀಕ್ಷೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಉಚಿತ. ಈ ನಂಬಿಕೆಗಳು ಹೇಗೆ ಬಂದುವು ಹೇಳುವುದು ಕಷ್ಟ. ಆದರೆ ಈ ನಂಬಿಕೆಗಳಲ್ಲಿ ಯಾವುದು ಎಷ್ಟು ಸರಿ, ಎಷ್ಟು ಅವೈಜ್ಞಾನಿಕ ಎಂಬುದನ್ನು ನೋಡೋಣ.

 ಆಲ್ಕೋಹಾಲ್ ಒಂದು ಔಷಧಿ :

       ಗ್ರಾಮೀಣ ಪ್ರದೇಶಗಳಲ್ಲಿ, ನಗರದ ಮದ್ಯಮ ಕೆಳವರ್ಗದವರ ಮನೆಗಳಲ್ಲಿ ಬಾಣಂತಿ ಇದ್ದರೆ ಆ ಮನೆಯಲ್ಲಿ ಬ್ರಾಂದಿ ಶೀಸೆ ಇರುವುದನ್ನು ಕಾಣಬಹುದು.

‘ಬಾಣಂತಿಗೆ ದಿನಕ್ಕೆ ಎರಡು ಬಾರಿ ಒಂದು ಚಮಚ ಬ್ರಾಂದಿ ಕೊಡುತ್ತೇವೆ. ಸನ್ನಿ ಯಾಗುವುದಿಲ್ಲ’ ಎಂದು ಹೇಳುತ್ತಾರೆ. ಹಾಗೆಯೇ ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದ ರೋಗಿಗೆ ಬ್ರಾಂದಿ ಕೊಡುವುದನ್ನು, ಆತನ ಲಕ್ವ ಹೊಡೆದು ನಿಷ್ಕ್ರಿಯವಾಗಿರುವ ಕೈ ಕಾಲುಗಳಿಗೆ ಬ್ರಾಂದಿ ತಿಕ್ಕುವುದನ್ನೂ ಕಾಣಬಹುದು. ಅಸ್ತಮ ಇರುವವರು ಬ್ರಾಂದಿಯನ್ನು, ವಿಸ್ಕಿಯನ್ನು ಸೇವಿಸಿದರೆ ಒಳ್ಳೆಯದು ಎಂಬ ನಂಬಿಕೆಯೂ ಇದೆ. ಆದರೆ ಅಲೋಹಾಲ್‌ನಲ್ಲಿ ಅಂತಹ ಯಾವ ಔಷಧೀಯ ಗುಣವೂ ಇಲ್ಲ. ಬಾಣಂತಿಗೆ, ಲಕ್ವ ರೋಗಿಗೆ, ಆಸ್ತಮಾ ರೋಗಿಗೆ ಇದನ್ನು ಕೊಡುವ ಅಗತ್ಯವಿಲ್ಲ. ಎಷ್ಟೋಸಲ ಮದ್ಯಪಾನ ಚಟಕ್ಕೆ ಬಿದ್ದ ಸ್ತ್ರೀಯನ್ನು ‘ಏನಮ್ಮಾ, ಏಕೆ, ಯಾವಾಗ ನೀನು ಮದ್ಯಪಾನ ಮಾಡಲು ಶುರು ಮಾಡಿದೆ ಎಂದು ಕೇಳಿದರೆ, ಅದರಲ್ಲಿ ಕೆಲವರಾದರೂ ‘ಡಾಕ್ಟರೇ, ಬಾಣಂತಿಯಾಗಿದ್ದಾಗ, ಮನೆಯವರೇ ತಂದು ಕೊಡುತ್ತಿದ್ದರು. ಆಗ ಅದರ ರುಚಿ ಹತ್ತಿ, ನಾನು ಈ ಸ್ಥಿತಿಗೆ ಬರುವಂತಾಯಿತು’ ಎನ್ನುತ್ತಾರೆ. ಇನ್ನು ಕೆಲವರು ‘ಡಾಕ್ಟರೇ ಆಲ್ನೋಹಾಲ್‌ನಲ್ಲಿ ಔಷಧೀಯ ಗುಣವಿಲ್ಲ ದಿದ್ದರೆ, ಅದನ್ನು ಟಾನಿಕ್‌ನಲ್ಲಿ, ಕೆಮ್ಮಿನ ಔಷಧಿಯಲ್ಲಿ ಏಕೆ ಸೇರಿಸುತ್ತಾರೆ’ ಎಂದು ಕೇಳುತ್ತಾರೆ. ಪಾಪ, ಅವರಿಗೆ ಗೊತ್ತಿಲ್ಲ. ಯಾವುದೇ ವ್ಯಕ್ತಿಗೆ ಟಾನಿಕ್‌ನ ಅಗತ್ಯ ವಾಗಲೀ, ಕೆಮ್ಮಿನ ಔಷಧಿಯಾಗಲೀ ಅಗತ್ಯವಿಲ್ಲ ಎಂಬುದು. ಔಷಧಿ ಕಂಪನಿಗಳು ಹಣ ಸಂಪಾದನೆಗೆ ಟಾನಿಕ್, ಕೆಮ್ಮಿನ ಸಿರಪ್‌ಗಳನ್ನು ತಯಾರು ಮಾಡಿ, ಪ್ರಚಾರ ದೊಂದಿಗೆ, ವೈದ್ಯರ ಮೇಲೆ, ಜನಗಳ ಮೇಲೆ ಅವನ್ನು ಉಪಯೋಗಿಸಲು ಒತ್ತಾಯ ತರುತ್ತಾರೆ. ಅತ್ಯಲ್ಪ ಪ್ರಮಾಣದಲ್ಲಿ ಆಲೋಹಾಲ್ ಟಾನಿಕ್, ಸಿರಪ್ ನಲ್ಲಿರುವ ಸಸ್ಯಮೂಲ / ಪ್ರಾಣಿ ಮೂಲದ ವಸ್ತುಗಳು ಹಾಳಾಗದಂತೆ ನೋಡಿಕೊಳ್ಳುತ್ತದೆ. ಆಲೋಹಾಲ್‌ನ ಉಪಯೋಗ ಅಷ್ಟೇ..