ಬೆಂಗಳೂರು: ನೀರಾವರಿ ವಿಷಯದಲ್ಲಿ ರಾಜ್ಯದ ಹಿತ ರಕ್ಷಣೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸರ್ವಪಕ್ಷ ಸಭೆಯಲ್ಲಿ ಸರ್ಕಾರದ ನಿಲುವು ಸ್ಪಷ್ಟಪಡಿಸಿದರು.
ಕಾವೇರಿ, ಮೇಕೆದಾಟು ಮತ್ತು ಮಹಾದಾಯಿ ಜಲ ವಿವಾದಗಳ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ವಪಕ್ಷ ಸಭೆ ಆರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರದ ಕಾನೂನು ಹೋರಾಟ ಮುಂದುವರೆಯಲಿದ್ದು, ಎಲ್ಲಪಕ್ಷಗಳು ಬೆಂಬಲಕ್ಕೆ ನಿಲ್ಲಬೇಕೆಂದು ಕೋರಿದರು.
ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ರಾಜ್ಯದ ಪರಿಸ್ಥಿತಿಯ ಕುರಿತು ಮಾಹಿತಿ ಹಂಚಿಕೊಂಡು, ಕಾನೂನು ಹೋರಾಟದ ತಯಾರಿ ಬಗ್ಗೆ ವಿವರಣೆ ನೀಡಿದರು.
ಕರ್ನಾಟಕ ಮತ್ತು ಕೇರಳದ ಕಾವೇರಿ ಕಣಿವೆಯ ಪ್ರದೇಶದಲ್ಲಿ ನೈಋತ್ಯ ಮಾನ್ಸೂನ್ ವೈಫಲ್ಯದಿಂದಾಗಿ 2023-24ರ ಜಲ ವರ್ಷವು ಸಂಕಷ್ಟದ ವರ್ಷವಾಗಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿಯು ತನ್ನ ಸಭೆಯಲ್ಲಿ ಜೂನ್‌ವರೆಗಿನ ಮಳೆಯ ಕೊರತೆಯನ್ನು ಗಮನಿಸಿದೆ. ಆಗಸ್ಟ್ 10 ರಂದು 15,000 ಕ್ಯೂಸೆಕ್ ನೀರು ಬಿಡಲು ಸೂಚಿಸಿತು. ಇದನ್ನು ರಾಜ್ಯ ಬಲವಾಗಿ ವಿರೋಧಿಸಿದ್ದು, ನೀರಿನ ಪ್ರಮಾಣ 10,000 ಕ್ಯೂಸೆಕ್ ಗೆ ಇಳಿಕೆ ಮಾಡಿದೆ ಎಂದು ವಿವರಿಸಿದರು.
ತಮಿಳುನಾಡು ಸುಪ್ರೀಂ ಕೋರ್ಟಿನಲ್ಲಿ ನೀರು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದು, ಶುಕ್ರವಾರ ಮೂರು ನ್ಯಾಯಾಧೀಶರ ಪೀಠದ ಮುಂದೆ ವಿಚಾರಣೆಗೆ ಬರಲಿದೆ ಎಂದು ಶೆಟ್ಟಿ ಅವರು ಮಾಹಿತಿ ಹಂಚಿಕೊಂಡರು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ವೀರಪ್ಪ ಮೊಯಿಲಿ, ಸಂಸದರಾದ ಸುಮಲತಾ, ಜಗ್ಗೇಶ್, ಡಾ. ಹನುಮಂತಯ್ಯ, ಮುನಿಸ್ವಾಮಿ, ಜಿ.ಎಂ. ಸಿದ್ದೇಶ್ವರ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಮೊದಲಾದವರು ರಾಜ್ಯದ ಕಾನೂನು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಹಾಗೂ ಸಂಕಷ್ಟ ಹಂಚಿಕೆ ಸೂತ್ರವನ್ನು ಇನ್ನಷ್ಟು ನಿರ್ದಿಷ್ಟಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.