ಮೈಸೂರು(Mysuru): ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ವಿದ್ಯಾ ಶಂಕರ್ ಸಹಾಯಕ ಕುಲಸಚಿವ (ಪರೀಕ್ಷಾಂಗ ವಿಭಾಗ) ಎಸ್.ಪ್ರದೀಪ್ ಗಿರಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾದ ಬೆನ್ನಲ್ಲೇ ಕುಲಪತಿ ವಿದ್ಯಾ ಶಂಕರ್ ಸಹಾಯಕ ಕುಲಸಚಿವ ಎಸ್. ಪ್ರದೀಪ್ ಗಿರಿ ವಿರುದ್ಧ ಜಯಲಕ್ಷ್ಮಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ.
ಕರ್ತವ್ಯಕ್ಕೆ ಪದೆಪದೇ ಗೈರು ಹಾಜರಾಗುತ್ತಿದ್ದ ಹಿನ್ನೆಲೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ಅದಕ್ಕೆ ಉತ್ತರ ನೀಡಿರಲಿಲ್ಲ. ಆದರೆ ಮಂಗಳವಾರ ಮಧ್ಯಾಹ್ನ ಕರ್ತವ್ಯಕ್ಕೆ ತಡವಾಗಿ ಆಗಮಿಸಿದ್ದು ಈ ಬಗ್ಗೆ ಕೇಳಿದಾಗ ಅವ್ಯಾಚ ಶಬ್ದಗಳಿಂದ ನಿಂದಿಸಿ ಅಗೌರವ ತೋರಿದ್ದಾರೆ. ಅಲ್ಲದೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸುಳ್ಳು ದೂರು ನೀಡಿದ್ದಾರೆ ಎಂದು ಕುಲಪತಿಗಳು ಪ್ರದೀಪ್ ಗಿರಿ ವಿರುದ್ಧ ದೂರು ನೀಡಿದ್ದಾರೆ.
ಹಲ್ಲೆ ಆರೋಪ: ಮಂಗಳವಾರ ಮಧ್ಯಾಹ್ನ ನನ್ನನ್ನು ಕುಲಪತಿಗಳು ಅವರ ಕೊಠಡಿಗೆ ಕರೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸಹಾಯಕ ಕುಲಸಚಿವ ಎಸ್. ಪ್ರದೀಪ್ ಗಿರಿ ಜಯಲಕ್ಷ್ಮಿ ಪುರಂ ಠಾಣೆಗೆ ಕುಲಪತಿ ವಿದ್ಯಾ ಶಂಕರ್ ಹಾಗೂ ಆಪ್ತ ಸಹಾಯಕ ದೇವರಾಜ್ ವಿರುದ್ಧ ದೂರು ನೀಡಿದ್ದಾರೆ.
ದೂರು ಪ್ರತಿ ದೂರಿನ ಹಿನ್ನೆಲೆ ಜಯಲಕ್ಷ್ಮಿ ಪುರಂ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಮುಕ್ತ ವಿವಿಯ ಕಚೇರಿಯ ಸಿಬ್ಬಂದಿಯಿಂದ ಮಾಹಿತಿ ಪಡೆದು ಅಲ್ಲಿರುವ ಸಿಸಿ ಕ್ಯಾಮರಾ ಪರಿಶೀಲಿಸಿದ್ದಾರೆ.