ಬೆಂಗಳೂರು: ʼಗಿಚ್ಚಿ ಗಿಲಿ ಗಿಲಿ-3ʼ ಕಾರ್ಯಕ್ರಮದ ವಿಜೇತ ಹುಲಿ ಕಾರ್ತಿಕ್ ಸೇರಿದಂತೆ ನಾಲ್ವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ʼಗಿಚ್ಚಿ ಗಿಲಿ ಗಿಲಿ-3ʼ ಕಾರ್ಯಕ್ರಮದಲ್ಲಿ ತನ್ನ ಹಾಸ್ಯದ ಮೂಲಕವೇ ಅಪಾರ ಪ್ರೇಕ್ಷಕರನ್ನು ರಂಜಿಸಿ ವಿನ್ನರ್ ಆಗಿ ಹೊರಹೊಮ್ಮಿದ ಹುಲಿ ಕಾರ್ತಿಕ್, ಬಿಗ್ ಬಾಸ್ ಕನ್ನಡ-11 ದಲ್ಲಿ ಸ್ಪರ್ಧಿಯಾಗಿ ಭಾಗಿಯಾಗುತ್ತಾರೆ ಎನ್ನಲಾಗಿತ್ತು. ಆದರೆ ಅದು ಬರೀ ವದಂತಿ ಆಗಿತ್ತು.
ಇದೀಗ ಅವಾರ್ಡ್ ಕಾರ್ಯಕ್ರಮದಲ್ಲಿ ಹುಲಿ ಕಾರ್ತಿಕ್ ಮಾತನಾಡಿದ ವಿಚಾರಕ್ಕೆ ಅವರ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ.
ಖಾಸಗಿ ವಾಹಿನಿಯ ‘ಅನುಬಂಧʼ ಎನ್ನುವ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಬೋವಿ ಜನಾಂಗಕ್ಕೆ ನೋವುಂಟು ಮಾಡುವ ಪದವನ್ನು ಉಪಯೋಗಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಾರ್ತಿಕ್ ಹೇಳಿದ್ದೇನು?: ಯಾವುದೋ ರೋಡಲ್ಲಿ ಬಿದ್ದಿರುವ ವಡ್ಡನ ತರ ಇದ್ಯಾ. ಈ ಬೆಲ್ಟ್ ನನ್ನ ಕೈಯಲ್ಲಿ ಇದೆ ಎಂದರೆ ಅದಕ್ಕೆ ಸ್ಕ್ರಿಪ್ಟ್ ಕಾರಣವೆಂದು ಸ್ಕ್ರಿಪ್ಟ್ ರೈಟರ್ ಸಂದೀಪ್ ಅವರಿಗೆ ಧನ್ಯವಾದ ತಿಳಿಸಿದ್ದರು.
ಈ ಹೇಳಿಕೆ ಬೋವಿ ಸಮುದಾಯಕ್ಕೆ ನೋವುಂಟು ಮಾಡುವ ರೀತಿಯಿದ್ದು, ಇವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಲೋಕೇಶ್ ಎನ್ನುವವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಜಾತಿ ನಿಂದನೆ ಆರೋಪದ ಮೇಲೆ ಹುಲಿ ಕಾರ್ತಿಕ್ ಅಲ್ಲದೆ ‘ಅನುಬಂಧ ಅವಾರ್ಡ್ಸ್ʼನ ಸಂಭಾಷಣೆಕಾರ, ಕಾರ್ಯಕ್ರಮದ ನಿರ್ಮಾಪಕ, ನಿರ್ದೇಶಕರ ಮೇಲೂ ಪ್ರಕರಣವನ್ನು ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ A-1 ಹುಲಿ ಕಾರ್ತಿಕ್, A-2 ಅನುಬಂಧ ಸ್ಕ್ರಿಪ್ಟ್ ರೈಟರ್, A-3 ಅನುಬಂಧ ಡೈರೆಕ್ಟರ್, A-4 ನಿರ್ಮಾಪಕರಾಗಿದ್ದಾರೆ.
ಸದ್ಯ ಹುಲಿ ಕಾರ್ತಿಕ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.