ಕಾಸರಗೋಡು: ಕಣ್ಣೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೀಳ್ಕೊಡುಗೆ ಸಮಾರಂಭದಲ್ಲಿ ಭ್ರಷ್ಟಾಚಾರ ಆರೋಪ ಹೊರಿಸಿದ ಬೆನ್ನಲ್ಲೇ ಕಣ್ಣೂರು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್(ಎಡಿಎಂ) ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಈ ಹಿಂದೆ ಎಡಿಎಂ ಆಗಿ ಸೇವೆ ಸಲ್ಲಿಸಿದ್ದು, ಈಗ ಕಣ್ಣೂರು ಜಿಲ್ಲೆಯ ಎಡಿಎಂ ಆಗಿ ಸೇವೆ ಸಲ್ಲಿಸುತ್ತಿದ್ದ ನವೀನ್ ಬಾಬು ಅವರ ಮೃತದೇಹ ಕಣ್ಣೂರು ಪಳ್ಳಿಕುನ್ನಿನಲ್ಲಿರುವ ಕ್ವಾಟ್ರಸ್‌ನಲ್ಲಿ ಅ. 15ರಂದು ಬೆಳಗ್ಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನವೀನ್ ಬಾಬು ಅವರಿಗೆ ಕಣ್ಣೂರಿನಿಂದ ತಮ್ಮ ಹುಟ್ಟೂರಾದ ಪತ್ತನಂತಿಟ್ಟಕ್ಕೆ ವರ್ಗಾವಣೆಯಾಗಿತ್ತು. ಈ ಮಧ್ಯೆ ಕಣ್ಣೂರು ಕಲೆಕ್ಟರೇಟ್‌ನಲ್ಲಿ ಅ. 14ರಂದು ಸಂಜೆ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಆದರೆ ಆ ಕಾರ್ಯಕ್ರಮಕ್ಕೆ ಕಣ್ಣೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಪಿ. ದಿವ್ಯಾ ಅವರಿಗೆ ಆಹ್ವಾನ ನೀಡಿರಲಿಲ್ಲ. ಆದರೂ ಅವರು ಸಮಾರಂಭದಲ್ಲಿ ಭಾಗವಹಿಸಿ ಎಡಿಎಂ ನವೀನ್ ಬಾಬು ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ಮಾತನಾಡಿದ್ದರು.
ಕಣ್ಣೂರು ಜಿಲ್ಲೆಯ ಪೆಟ್ರೋಲ್ ಬಂಕೊಂದಕ್ಕೆ ಎನ್‌ಒಸಿ ನೀಡಲು ಅದರ ಮಾಲಕ ಕಣ್ಣೂರು ಕಲೆಕ್ಟರೇಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ಎಡಿಎಂ ತಿಂಗಳುಗಳ ತನಕ ಪರಿಗಣಿಸದೆ ಬಳಿಕ ಪತ್ತನಂತಿಟ್ಟಕ್ಕೆ ವರ್ಗಾವಣೆಗೊಳ್ಳುವ ದಿನಗಳ ಹಿಂದೆಯಷ್ಟೇ ಎನ್‌ಒಸಿ ನೀಡಿದ್ದರು. ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದರು.
ಇದರಿಂದ ಮನನೊಂದು ನವೀನ್ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.