ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಕೆ.ಆರ್. ಪುರದ ಹಿಂದಿನ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರನ್ನು ಏಳು ದಿನಗಳ ಕಾಲ ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಹಿನ್ನೆಲೆ ಕೆ.ಆರ್.ಪುರಂ ತಹಶೀಲ್ದಾರ್ ‘ಅಜಿತ್ ರೈ’ ಬಂಧನವಾಗಿತ್ತು. ಇಂದು ಅಜಿತ್ ರೈ ಯನ್ನು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದು, 10 ದಿನಕ್ಕೆ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಸಲ್ಲಿಸಿದ್ದರು. ಆದರೆ 7 ದಿನ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ನಗರದ ಕೆ.ಆರ್.ಪುರಂ ತಹಶೀಲ್ದಾರ್ ಅಜಿತ್ ರೈ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬರೋಬ್ಬರಿ 40 ಲಕ್ಷಕ್ಕೂ ಹೆಚ್ಚು ನಗದು ಸೇರಿದಂತೆ ವಿವಿಧ ಅಕ್ರಮ ಆಸ್ತಿಗಳನ್ನು ಪತ್ತೆ ಹಚ್ಚಿದ್ದರು. ಅಜಿತ್ ರೈಗೆ ಸೇರಿದ 100 ಎಕರೆಗೂ ಅಧಿಕ ವಿವಿಧ ಆಸ್ತಿ ಪತ್ರಗಳು ಸಿಕ್ಕಿದ್ದವು .
ಅಜಿತ್ ರೈ ಸಂಬಂಧಿಕರು, ಸ್ನೇಹಿತರ ಹೆಸರಲ್ಲೂ ಆಸ್ತಿ ಪತ್ರಗಳು, ಆಪ್ತರ ಮನೆಯಲ್ಲಿ ನಾಲ್ಕು ಫಾರ್ಚೂನರ್ ಕಾರುಗಳು ಪತ್ತೆಯಾಗಿವೆ. ನಿನ್ನೆ ತಹಶೀಲ್ದಾರ್ ‘ಅಜಿತ್ ರೈ’ ಬಂಧಿಸಿದ್ದ ಪೊಲೀಸರು ನಂತರ ಕೋರ್ಟ್ ಗೆ ಹಾಜರುಪಡಿಸಿದ್ದರು.