ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಬ್ಯಾಂಕಿನವರು ವಿಶ್ವವಿದ್ಯಾನಿಲಯದವರ ಜೊತೆ ಶಾಮೀಲಾಗಿ ಅಕ್ರಮ ಪಾವತಿಗೆ ನೆರವಾಗಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದ್ದು, ಈ ಸಂಬಂಧ ದಾಖಲೆ ಒದಗಿಸಲು ವಿವಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ, ಪ್ರಧಾನ ನಿರ್ದೇಶಕರು, ಉನ್ನತ ಶಿಕ್ಷಣ ಇಲಾಖೆಯ ಅಪಾರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ನಗರದ ಹೂಟಗಳ್ಳಿ ನಿವಾಸಿ ಕೆ.ಎಸ್.ಸಿ.ಪಿ.ಸಿ.ಆರ್ ಮಾಜಿ ಸದಸ್ಯ ಎಂ.ಎಲ್. ಪರಶುರಾಮ್ ಅವರ ದೂರಿನ ಮೇರೆಗೆ ಈ ಪತ್ರ ಬರೆಯಲಾಗಿದೆ. ಮುಕ್ತ ವಿವಿಯ ಆಕ್ಸಿಸ್ ಬ್ಯಾಂಕ್ ಕುವೆಂಪು ನಗರ ಶಾಖೆಯ ಕೋ ಆರ್ಡಿನೇಟರ್ ಬ್ಯಾಂಕ್ ಖಾತೆಯನ್ನು ಸಹಾಯಕ ಪ್ರಾಧ್ಯಾಪಕರಾದ ಡಾ.ಸುಮತಿ ಆರ್.ಗೌಡ ಅವರು ಸಂಯೋಜಕರಾಗಿ ನಿರ್ವಹಿಸುತ್ತಿದ್ದು, 2021 ಸೆಪ್ಟೆಂಬರ್ 28 ರಿಂದ 2022ರ ಮೇ 7 ರ ನಡುವೆ ಈ ಖಾತೆಗೆ ಒಟ್ಟು ಜಮೆಯಾದ 94,38,253 ಮತ್ತು ಡೆಬಿಟ್ ಮಾಡಿದ 85,86,629 ಮತ್ತು 2022ರ ಮೇ 7ಕ್ಕೆ 8,51,624 ಬ್ಯಾಲೆನ್ಸ್ ಇರುತ್ತದೆ. ಈ ಖಾತೆಯಿಂದ ಸಹಕಾರ ಸಂಘಗಳು, ಹಾಲು ಒಕ್ಕೂಟಗಳು, ವ್ಯಕ್ತಿಗಳು ಸೇರಿದಂತೆ ವಿವಿಧ ಸಂಸ್ಥೆಗಳಿಂದ ಮೊತ್ತವನ್ನು ಠೇವಣಿ ಮಾಡಿದ್ದಾರೆ ಎಂದು ವಿತರಿಸಿದ್ದಾರೆ.
2021ರ ಡಿಸೆಂಬರ್ 18 ರಿಂದ 2022ರ ಮೇ ಏಳರವರೆಗೆ 21,00,000 ರೂ ನ ಪ್ರಮುಖ ಮೊತ್ತವನ್ನು ಖಾತೆದಾರರು 1,00,000 ದಿಂದ 5,00,000 ರೂ.ವರೆಗೆ ವಿವಿಧ ಚೆಕ್ ಗಳ ಮೂಲಕ ಸ್ವಯಂ ಡ್ರಾ ಮಾಡಿಕೊಂಡಿದ್ದಾರೆ. ಕೆಎಸ್ ಓಯು ಕೆಲವು ಖಾತೆಗಳಿಗೆ ಕೆಲವು ನಿರ್ದಿಷ್ಟ ವ್ಯಕ್ತಿಗಳ ಹೆಸರಿನಲ್ಲಿ ಕೆಲವು ಮೊತ್ತಗಳನ್ನು ವಿಸ್ತರಿಸಿದೆ. ಕೆಎಸ್ ಓಯು ಮತ್ತು ಅದರ ವಿದ್ಯಾರ್ಥಿಗಳ ಕ್ಷೇಮಕ್ಕಾಗಿ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸುವ ಜೊತೆಗೆ ಕೆಎಸ್ ಓಯು ಬ್ಯಾಂಕ್ ಖಾತೆಯ ವಿಶೇಷ ಲೆಕ್ಕ ಪರಿಶೀಲನೆಗೆ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಕೋರಿದರು.
ಈ ದೂರಿನ ಹಿನ್ನೆಲೆಯಲ್ಲಿ 2021-22ನೇ ಸಾಲಿನ ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ಈ ಬಗ್ಗೆ ಲೆಕ್ಕಪರಿಶೋಧನಾ ವಿಚಾರಣಾ ಪತ್ರ ನೀಡಿದಾಗ ವಿಶ್ವವಿದ್ಯಾನಿಲಯದವರು ಈ ಸಂಬಂಧ ಯಾವುದೇ ಮಾಹಿತಿಯನ್ನಾಗಲೀ ಅಥವಾ ದಾಖಲೆಗಳನ್ನಾಗಲೀ ನೀಡಿಲ್ಲ. ಆ ವರ್ಷದಲ್ಲಿ ವಿಶ್ವವಿದ್ಯಾನಿಲಯದಿಂದ ನಿರ್ವಹಿಸಲಾಗಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ದೃಢೀಕರಿಸಿ ಲೆಕ್ಕಪರಿಶೋಧನೆಗೆ ನೀಡಿಲ್ಲ. ಇದರಿಂದಾಗಿ ವಿಶ್ವವಿದ್ಯಾನಿಲಯದವರು ಎಷ್ಟು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ ಎಂಬ ವಿವರಗಳು ಲೆಕ್ಕಪರಿಶೋಧನೆಗೆ ದೊರೆತಿಲ್ಲ.ವಿಶ್ವವಿದ್ಯಾನಿಲಯದವರು ಎಸ್.ಬಿ.ಐ ಕೆಎಸ್ಓಯು ಶಾಖೆಯಲ್ಲಿ ನಿರ್ವಹಿಸುತ್ತಿರುವ ಬ್ಯಾಂಕ್ ಖಾತೆಯ ಅಂಕಿ ಅಂಶಗಳನ್ನು ವಾರ್ಷಿಕ ಲೆಕ್ಕಪತ್ರಗಳಿಂದ ಹೊರಗಿಡಲಾಗಿದೆ ಎಂದು ಹೇಳಿದ್ದಾರೆ.