ಮನೆ ಕಾನೂನು ಮಾಧ್ಯಮಗಳಿಗೆ ದೀಪಾವಳಿ ಸಿಹಿ ತಿನಿಸಿನ ಜೊತೆ ಸಿಎಂ ಕಚೇರಿಯಿಂದ ಲಂಚ ಹಂಚಿಕೆ ಆರೋಪ: ಲೋಕಾಯುಕ್ತಕ್ಕೆ ದೂರು...

ಮಾಧ್ಯಮಗಳಿಗೆ ದೀಪಾವಳಿ ಸಿಹಿ ತಿನಿಸಿನ ಜೊತೆ ಸಿಎಂ ಕಚೇರಿಯಿಂದ ಲಂಚ ಹಂಚಿಕೆ ಆರೋಪ: ಲೋಕಾಯುಕ್ತಕ್ಕೆ ದೂರು ಸಲ್ಲಿಕೆ

0

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳಿಗೆ ಸಿಹಿ ತಿನಿಸುಗಳ ಬಾಕ್ಸ್ ಜೊತೆಗೆ ಲಂಚದ ಹಣ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ್ ಪಾಗೋಜಿ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಕ್ರಮಕೈಗೊಳ್ಳುವಂತೆ ಲೋಕಾಯುಕ್ತರಿಗೆ ಜನಾಧಿಕಾರ ಸಂಘರ್ಷ ಪರಿಷತ್ ಶುಕ್ರವಾರ ಈಮೇಲ್ ಮೂಲಕ ದೂರು ನೀಡಿದೆ.

ಡೆಕ್ಕನ್ ಹೆರಾಲ್ಡ್ ಮುಖ್ಯ ವರದಿಗಾರ ಭರತ್ ಜೋಶಿ ಅವರಿಗೆ ಸಿಹಿ ತಿನಿಸುಗಳ ಬಾಕ್ಸ್ ಜೊತೆ ಒಂದು ಲಕ್ಷ ರೂಪಾಯಿಯನ್ನು ದೀಪಾವಳಿ ಉಡುಗೊರೆಯನ್ನಾಗಿ ನೀಡಲಾಗಿದೆ. ಅದೇ ರೀತಿ ಪ್ರಜಾವಾಣಿ ಪತ್ರಿಕೆಯ ಮುಖ್ಯ ವರದಿಗಾರ ವೈ ಗ ಜಗದೀಶ್ ಅವರಿಗೂ ಸಿಹಿ ತಿನಿಸಿನ ಬಾಕ್ಸ್ ಜೊತೆಗೆ ಲಂಚ ನೀಡಲಾಗಿದೆ. ಈ ಕುರಿತು ಉಭಯ ಪತ್ರಕರ್ತರು ಸಂಸ್ಥೆಯ ಮುಖ್ಯಸ್ಥರ ಗಮನಕ್ಕೆ ತಂದಿದ್ದು, ಅದನ್ನು ಮರಳಿಸಲಾಗಿದೆ. ಈ ಕುರಿತು ಜಗದೀಶ್ ಅವರು ಮುಖ್ಯಮಂತ್ರಿ ಅವರಿಗೆ ಲಂಚ ನೀಡುವುದನ್ನು ಖಂಡಿಸಿ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಕಚೇರಿಯಿಂದ ಕ್ಷಮೆ ಸ್ವೀಕರಿಸಿರುವುದಾಗಿ ಜಗದೀಶ್ ತಿಳಿಸಿದ್ದಾರೆ ಎಂದು ಜನಾಧಿಕಾರ ಸಂಘರ್ಷ ಪರಿಷತ್ ಲೋಕಾಯುಕ್ತರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಮುಖ್ಯಮಂತ್ರಿ ನೇತೃತ್ವದ ಸರ್ಕಾರದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ವರದಿ ಮಾಡದಂತೆ ಮಾಡಲು ದೀಪಾವಳಿ ಹಬ್ಬದ ಸಿಹಿ ಹಂಚಿಕೆ ಸೋಗಿನಲ್ಲಿ ಲಂಚ ನೀಡಲು ಪ್ರಯತ್ನಿಸಲಾಗಿದೆ. ಇದು ಮುಖ್ಯಮಂತ್ರಿ ಕಚೇರಿಯ ದುರ್ಬಳಕೆಯಾಗಿದ್ದು, ಮಾಧ್ಯಮಗಳನ್ನು ಸರ್ಕಾರದ ಪರವಾಗಿ ಕೆಲಸ ಮಾಡಲು ಪ್ರಭಾವಿಸುವ ಪ್ರಯತ್ನವಾಗಿದೆ. ಗಂಭೀರ ಭ್ರಷ್ಟಾಚಾರದ ಆರೋಪ, ದುರಾಡಳಿತ, ಸಾರ್ವಜನಿಕ ಹಣದ ದುರ್ಬಳಕೆ ಮುಚ್ಚಿ ಹಾಕುವ ಯತ್ನದ ಭಾಗವು ಇದಾಗಿದೆ ಎಂದು ದೂರಿನಲ್ಲಿ ಆಕ್ಷೇಪಿಸಲಾಗಿದೆ.

ಹೀಗಾಗಿ, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ-1988 ಮತ್ತು ಭ್ರಷ್ಟಾಚಾರ ನಿಯಂತ್ರಣ (ತಿದ್ದುಪಡಿ) ಕಾಯಿದೆ-2018 ಅಡಿ ಕ್ರಮಕೈಗೊಳ್ಳುವಂತೆ ಲೋಕಾಯುಕ್ತರಿಗೆ ಮನವಿ ಮಾಡಲಾಗಿದೆ. ಇದೇ ದೂರಿನ ಪ್ರತಿಯನ್ನು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೂ ಸಲ್ಲಿಸಲಾಗಿದೆ.