ಮನೆ ಕಾನೂನು ಎಸ್‌ ಸಿ, ಎಸ್‌ ಟಿ ಅನುದಾನ ಮುಸ್ಲಿಮರಿಗೆ ಹಂಚಿಕೆ ಆರೋಪ: ನಡ್ಡಾ, ಮಾಳವಿಯಾ ವಿರುದ್ಧ ಬಲವಂತದ...

ಎಸ್‌ ಸಿ, ಎಸ್‌ ಟಿ ಅನುದಾನ ಮುಸ್ಲಿಮರಿಗೆ ಹಂಚಿಕೆ ಆರೋಪ: ನಡ್ಡಾ, ಮಾಳವಿಯಾ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಆದೇಶ

0

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಸೇರಬೇಕಾದ ಅನುದಾನವನ್ನು ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರಿಗೆ ಹಂಚುತ್ತಾರೆ ಎಂಬಂತಹ ಅನಿಮೇಟೆಡ್‌ ವಿಡಿಯೊವನ್ನು ಬಿಜೆಪಿಯ ಅಧಿಕೃತ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ ಬಿಜೆಪಿ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಒತ್ತಾಯಪೂರ್ವಕ ಕ್ರಮಕ್ಕೆ ಮುಂದಾಗಬಾರದು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

Join Our Whatsapp Group

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ ಅಮಿತ್ ಮಾಳವೀಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಮುಂದಿನ ವಿಚಾರಣೆಯವರೆಗೆ ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಒತ್ತಾಯಪೂರ್ವಕ ಕ್ರಮ ಕೈಗೊಳ್ಳಬಾರದು” ಎಂದು ಆದೇಶಿಸಿದರು. ಜೆ ಪಿ ನಡ್ಡಾ ಮತ್ತು ಅಮಿತ್‌ ಮಾಳವೀಯ ಪರ ಹೈಕೋರ್ಟ್ ವಕೀಲ ಎಂ ವಿನೋದ್‌ ಕುಮಾರ್ ಹಾಜರಿದ್ದರು.

ಪ್ರಕರಣದ ಹಿನ್ನೆಲೆ: ಅಮಿತ್‌ ಮಾಳವೀಯ ಅವರು ಜೆ ಪಿ ನಡ್ಡಾ ಮತ್ತು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಸೂಚನೆಯಂತೆ ಪಕ್ಷದ ಅಧಿಕೃತ ಎಕ್ಸ್‌ ಖಾತೆಯಲ್ಲಿ ಎಚ್ಚರ, ಎಚ್ಚರ, ಎಚ್ಚರ ಎಂಬ ಒಂದು ಅನಿಮೇಟೆಡ್‌ ವಿಡಿಯೊ ಪೋಸ್ಟ್‌ ಮಾಡಿದ್ದರು. ಈ ವಿಡಿಯೊದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳನ್ನು ಮೊಟ್ಟೆಗಳು ಎಂದು ಬಿಂಬಿಸಿ ಈ ಮೊಟ್ಟೆಗಳಿರುವ ಬುಟ್ಟಿಗೆ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಮ್ ಎಂಬ ಮತ್ತೊಂದು ಮೊಟ್ಟೆಯನ್ನು ತಂದಿಟ್ಟು, ಈ ಮೊಟ್ಟೆ ಮರಿಯಾದ ನಂತರ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಬೇಕಾದ ಅನುದಾನವನ್ನು ಮುಸ್ಲಿಂ ಸಮುದಾಯಕ್ಕೆ ಸೇರಿದ ಮೊಟ್ಟೆಯಿಂದ ಬಂದ ಮರಿಯ ಬಾಯಿಗೆ ತಿನ್ನಿಸುವಂತೆ ಅನಿಮೇಶನ್‌ ರೂಪಿಸಲಾಗಿದೆ. ಮುಸ್ಲಿಂ ಸಮುದಾಯ ಹೋಲುವ ಪಕ್ಷಿಯು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳನ್ನು ಗೂಡಿನಿಂದ ಒದ್ದು ಓಡಿಸುವಂತೆ ಚಿತ್ರಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. 2024ರ ಏಪ್ರಿಲ್‌ 4ರ ಸಂಜೆ ಪೋಸ್ಟ್‌ ಮಾಡಲಾಗಿರುವ ಈ ಟ್ವೀಟ್‌ ವಿವಿಧ ಸಮುದಾಯಗಳ ನಡುವೆ ದ್ವೇಷ ಕೆರಳಿಸುವ ರೀತಿಯಲ್ಲಿದೆ. ಆರೋಪಿಗಳು ಈ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಿಭಾಗದ ಉಪಾಧ್ಯಕ್ಷ ಎಂ ರಮೇಶ್ ಬಾಬು 2024ರ ಏಪ್ರಿಲ್‌ 5ರಂದು ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಇದರ ಅನ್ವಯ ಜನಪ್ರತಿನಿಧಿ ಕಾಯಿದೆ ಸೆಕ್ಷನ್‌ 125 ಮತ್ತು ಐಪಿಸಿ ಸೆಕ್ಷನ್‌ 505 (2)ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು