ಮುಂಬೈ : ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅಧಿಕಾರ ಪಡೆಯಲು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ವಿರುದ್ಧ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿಮಾಡಿಕೊಂಡಿದೆ. ಮಹಾರಾಷ್ಟ್ರದ ಅಂಬರ್ನಾಥ್ ನಗರ ಸಭೆಯಲ್ಲಿ ಬಿಜೆಪಿಯ ತೇಜಶ್ರೀ ಕರಂಜುಲೆ ಮೇಯರ್ ಪಟ್ಟವನ್ನು ಅಲಂಕರಿಸಿದ್ದಾರೆ. ಬಿಜೆಪಿಯ 16, ಕಾಂಗ್ರೆಸ್‌ನ 12 ಮತ್ತು ಎನ್‌ಸಿಪಿ ನಾಲ್ವರು ಸದಸ್ಯರ ಬೆಂಬಲವನ್ನು ಮೈತ್ರಿಕೂಟ ಹೊಂದಿದ್ದು, ನಗರಸಭೆಯಲ್ಲಿ ಸ್ಪಷ್ಟ ಬಹುಮತವನ್ನು ಪಡೆದಿದೆ.
ಡಿಸೆಂಬರ್ 20 ರಂದು ನಡೆದ 60 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಪಕ್ಷವು ಅತಿ ಹೆಚ್ಚು 27 ಸ್ಥಾನಗಳನ್ನು ಗೆದ್ದುಕೊಂಡಿದ್ದರೂ ಬಹುಮತಕ್ಕೆ 4 ಸ್ಥಾನಗಳ ಅಗತ್ಯವಿತ್ತು. ಅಂಬರ್ನಾಥ್ ವಿಕಾಸ್ ಅಘಾಡಿ ಹೆಸರಿನಲ್ಲಿ ಮೂರು ಪಕ್ಷಗಳು ಒಂದಾಗಿವೆ. ಈ ಮೈತ್ರಿಕೂಟಕ್ಕೆ ಯಾವುದೇ ಔಪಚಾರಿಕ ಪ್ರಸ್ತಾವನೆ ಇನ್ನೂ ಬಂದಿಲ್ಲ ಎಂದು ಕಾಂಗ್ರೆಸ್ ರಾಜ್ಯ ನಾಯಕತ್ವ ಹೇಳಿದೆ. ಇವು ಸ್ಥಳೀಯ ಚುನಾವಣೆಗಳಾಗಿದ್ದು ಸ್ಥಳೀಯ ನಾಯಕರಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ನೀಡಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಶಿಂಧೆ ಬಣದ ಶಾಸಕ ಬಾಲಾಜಿ ಕಿನಿಕರ್ ಅವರು ಈ ಮೈತ್ರಿಕೂಟವನ್ನು ಅಪವಿತ್ರ ಮೈತ್ರಿ ಎಂದು ಕರೆದಿದ್ದು ಬಿಜೆಪಿ ದ್ರೋಹ ಮಾಡಿದೆ ಎಂದು ಆರೋಪಿಸಿದರು. ಬಿಜೆಪಿ ದೇಶಾದ್ಯಂತ ಕಾಂಗ್ರೆಸ್ ಮುಕ್ತದ ಬಗ್ಗೆ ಮಾತನಾಡುತ್ತಿದೆ. ಆದರೆ ಇಲ್ಲಿ ಕಾಂಗ್ರೆಸ್ ಜೊತೆ ಸೇರಿ ಆಡಳಿತ ನಡೆಸುತ್ತಿದೆ. ಇದು ಶಿವಸೇನೆಯ ಬೆನ್ನಿಗೆ ಚೂರಿ ಹಾಕುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ ಎಂದು ದೂರಿದರು.
ಬಿಜೆಪಿ ಉಪಾಧ್ಯಕ್ಷ ಗುಲಾಬ್ರಾವ್ ಕರಂಜುಲೆ ಪಾಟೀಲ್ ಅವರು ಶಿವಸೇನೆಯೊಂದಿಗಿನ ಮೈತ್ರಿ ನಿಜವಾಗಿಯೂ ಅಪವಿತ್ರವಾಗುತ್ತಿತ್ತು ಎಂದು ಹೇಳಿದ್ದಾರೆ. ಕಳೆದ 25 ವರ್ಷಗಳಿಂದ ಇಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಅಂಬರ್ನಾಥ್‌ನಲ್ಲಿ ಶಿವಸೇನೆ ಜೊತೆ ಮೈತ್ರಿ ಮಾಡಲು ಬಿಜೆಪಿ ಹಲವಾರು ಪ್ರಯತ್ನಗಳನ್ನು ಮಾಡಿತ್ತು. ಆದರೆ ಆ ಪಕ್ಷದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ ಎಂದು ಹೇಳಿದರು.















