ನವದೆಹಲಿ : ಪ್ರಮುಖ ವಲಯಗಳಿಗೆ ಎಲ್‌ಪಿಜಿ ಹಂಚಿಕೆ ಮಾಡಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಈ ಸಂಬಂಧ ಪತ್ರ ಬರೆದಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕಾರ್ಯದರ್ಶಿ ನೀರಜ್ ಮಿತ್ತಲ್, ಪ್ರಮುಖ ಉದ್ಯಮಗಳು ಈಗ ತಮ್ಮ ಎಲ್‌ಪಿಜಿ ಅಗತ್ಯಗಳಲ್ಲಿ ಶೇ. 70 ರಷ್ಟು ಪಡೆಯಲಿವೆ. ಮಾರ್ಚ್ 2026 ರ ಪೂರ್ವದಲ್ಲಿ ಅವುಗಳ ಬೃಹತ್ ಗೃಹೇತರ ಬಳಕೆಯ ಆಧಾರದ ಮೇಲೆ ಇದನ್ನು ಪೂರೈಸಲಾಗುವುದು ಎಂದು ತಿಳಿಸಿದ್ದಾರೆ.
ಇರಾನ್ ಸಂಘರ್ಷದಿಂದಾಗಿ ಪೂರೈಕೆಯಲ್ಲಿ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ಈ ಪತ್ರ ಬಂದಿದೆ. ಭಾರತದ ಎಲ್‌ಪಿಜಿ ಆಮದುಗಳಲ್ಲಿ ಹೆಚ್ಚಿನ ಭಾಗ ಮಧ್ಯಪ್ರಾಚ್ಯದಿಂದ ಬರುತ್ತಿದೆ. ಇರಾನ್ ನಿರ್ಣಾಯಕ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿ ಇತರ ಗಲ್ಫ್ ರಾಷ್ಟ್ರಗಳಿಗೆ ದಾಳಿ ಮಾಡಿರುವುದರಿಂದ, ಭಾರತಕ್ಕೆ ಎಲ್‌ಪಿಜಿ ಪೂರೈಕೆಯಲ್ಲಿ ಹೊಡೆತ ಬಿದ್ದಿದೆ.
ಈ ಕ್ರಮವು ಔಷಧ, ಆಹಾರ, ಪಾಲಿಮರ್ ಮತ್ತು ಕೃಷಿಯಂತಹ ಕ್ಷೇತ್ರಗಳಿಗೆ ಹೆಚ್ಚಿನ ಎಲ್‌ಪಿಜಿ ಪೂರೈಕೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಪ್ಯಾಕೇಜಿಂಗ್, ಪೇಂಟ್, ಯುರೇನಿಯಂ, ಹೆವಿ ವಾಟರ್, ಸ್ಟೀಲ್, ಸೀಡ್, ಮೆಟಲ್, ಸೆರಾಮಿಕ್, ಫೌಂಡ್ರಿ, ಫೋರ್ಜಿಂಗ್, ಗ್ಲಾಸ್ ಮತ್ತು ಏರೋಸಾಲ್ ಸೇರಿದಂತೆ ಇತರ ಘಟಕಗಳು ಇದರಲ್ಲಿ ಸೇರಿವೆ.
ಎಲ್‌ಪಿಜಿಗೆ ಹಂಚಿಕೆಯು ದಿನಕ್ಕೆ ಒಟ್ಟಾರೆ ವಲಯವಾರು 0.2 ಟಿಎಂಟಿ ಮಿತಿಗೆ ಒಳಪಟ್ಟಿರುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ನೈಸರ್ಗಿಕ ಅನಿಲದಿಂದ ಬದಲಾಯಿಸಲಾಗದ ವಿಶೇಷ ಉದ್ದೇಶಗಳಿಗಾಗಿ ಎಲ್‌ಪಿಜಿ ಅಗತ್ಯವಿರುವ ಘಟಕಗಳಿಗೆ ಪರಸ್ಪರ ಆದ್ಯತೆ ನೀಡಲಾಗುವುದು.














