ಮನೆ ರಾಜಕೀಯ ಶಿವಮೊಗ್ಗದಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆಗೆ 60 ಎಕರೆ ಜಮೀನು ಹಂಚಿಕೆ: ಜಿಗಜಿಣಗಿ ಆರೋಪ

ಶಿವಮೊಗ್ಗದಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆಗೆ 60 ಎಕರೆ ಜಮೀನು ಹಂಚಿಕೆ: ಜಿಗಜಿಣಗಿ ಆರೋಪ

0

ವಿಜಯಪುರ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶಿವಮೊಗ್ಗದಲ್ಲಿ 60 ಎಕರೆ ಜಮೀನು ಹಂಚಿಕೆಯಾಗಿದೆ. ಕೋರ್ಟನಲ್ಲಿ ಅಡ್ವರ್ಸ್ ಆಗಿರುವ ಮಾಹಿತಿ ಇದೆ. ನಮ್ಮ ಪಕ್ಷದ ಮುಖಂಡರು ದಾಖಲೆ ಸಂಗ್ರಹಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಗಂಭೀರ ಆರೋಪ ಮಾಡಿದ್ದಾರೆ.

Join Our Whatsapp Group

ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಖರ್ಗೆ ಅವರಿಗೆ 60 ಎಕರೆ ಜಮೀನು ಹಂಚಿಕೆ ಆಗಿರುವ ಆರೋಪದ ಬಗ್ಗೆ ಶಿವಮೊಗ್ಗ ನಾಯಕರು ಮತನಾಡುತ್ತಾರೆ ಎಂದರು.

ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ವಾಲ್ಮೀಕಿ ನಿಗಮದ ಹಾಗೂ ಮುಡಾ ಹಗರಣ ಮಾತ್ರವಲ್ಲ, ಇನ್ನೂ ಎಷ್ಟೆಷ್ಟು ಇವೆ ಎಂದು ಬಿಚ್ಚಿಡಲಾ ಎಂದು ಹರಿಹಾಯ್ದಿರುವ ಜಿಗಜಿಣಗಿ, ಸಮಯ ಬಂದಾಗ ಎಲ್ಲವನ್ನೂ ಹೇಳುವೆ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಹೆಸರಿನಲ್ಲಿ ನಿವೇಶನ‌ ಪಡೆದಿರುವ ಕುರಿತು ನನ್ನ ಬಳಿ ಯಾವುದೇ ದಾಖಲೆ ಇಲ್ಲ. ಈ ಕುರಿತಾಗಿ ಸಚಿವ ಮಹದೇವಪ್ಪ ನೀಡಿರುವ ಹೇಳಿಕೆ ಗಮನಿಸಿದ್ದೇನೆ ಎಂದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಒಂದೂ ಭ್ರಷ್ಟಾಚಾರ ನಡೆದಿಲ್ಲ. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಸಾಲು ಸಾಲು ಹಗರಣ ನಡೆಯುತ್ತಿದ್ದು, ಹಿಂದೆ 60-65 ವರ್ಷ ಆಡಳಿತ ನಡೆಸಿದಾಗಲೂ ಹಗರಣಗಳನ್ನೇ ಮಾಡಿದೆ. ಭ್ರಷ್ಟಾಚಾರ ಕಾಂಗ್ರೆಸ್ ಹುಟ್ಟು ಗುಣ ಎಂದು ಕಿಡಿ ಕಾರಿದರು.

ಕಾಂಗ್ರೆಸನ ಭ್ರಷ್ಟಾಚಾರದ ಚಾಳಿ ಸಿದ್ದರಾಮಯ್ಯ ಸರ್ಕಾರದಲ್ಲೂ ಮುಂದುವರೆದಿದೆ. ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾದರು ಒಂದೂ ಅಭಿವೃದ್ಧಿ ಕೆಲಸ ಆಗಿಲ್ಲ. ಗ್ಯಾರಂಟಿ ಹೆಸರಿನಲ್ಲಿ ದಲಿತರ ಹಣ ನುಂಗಿ ಕುಳಿತಿದ್ದಾರೆ.

ವಾಲ್ಮೀಕಿ ನಿಗಮದಲ್ಲಿ ನಡೆದಂತೆ ಈ ವರೆಗೂ ದೇಶದಲ್ಲಿ ಇಂತಹ ಹಗರಣ ನಡೆದಿರಲಿಲ್ಲ. ಪ್ರತಿ ವರ್ಷ ಸಂಸದನಾಗಿ ನನಗೂ ಬರುತ್ತಿದ್ದ ವಾರ್ಷಿಕ 5 ಕೋಟಿ ರೂ‌. ಎಸ್ಸಿಪಿ ಅನುದಾನ ಬಂದಿಲ್ಲ.

ಮುಖ್ಯಮಂತ್ರಿ ಸಿದ್ಧರಾಮಯ್ಯ ದಲಿತರ ಅಭಿವೃದ್ಧಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿರುವುದು ಖಂಡನೀಯ. ಎಸ್ಸಿ ಸಮುದಾಯದ 32 ಕೋಟಿ, ಎಸ್ಟಿ ಸಮುದಾಯದ 13-14 ಕೋಟಿ ಹಣವನ್ನು ಸರ್ಕಾರ ಬೇರೆ ಕೆಲಸಕ್ಕೆ ಬಳಸಿಕೊಂಡಿದೆ ಎಂದು ಹರಿಹಾಯ್ದರು.

ಹಿಂದೆಂದೂ ಯಾವ ಸರ್ಕಾರಗಳೂ ದಲಿತರ ಹಣವನ್ನ ಇತರೆ ಕೆಲಸಕ್ಕೆ ಪಡೆದಿರಲಿಲ್ಲ. ನಿಮಗೇನು ಧಾಡಿಯಾಗಿದೆ, ನಿಮಗೆ ದಲಿತರ ಹಣವೇ ಬೇಕಿತ್ತಾ. ಬೇರೆ ಬೇರೆ ಇಲಾಖೆಯಲ್ಲಿ ಸಾಕಷ್ಟು ಹಣವಿದ್ದು, ಅದನ್ನೇಕೆ ಮುಟ್ಟಲಿಲ್ಲ ಎಂದು ಪ್ರಶ್ನಿಸಿದ ಜಿಗಜಿಣಗಿ, ಈ ಬಗ್ಗೆ ಸಚಿವ ಮಹಾದೇವಪ್ಪ ಪ್ರತಿಭಟನೆ ಮಾಡಬೇಕು ಎಂದು ಆಗ್ರಹಿಸಿದರು.

ಜನತಾ ಪರಿವಾರದ ಸರ್ಕಾರ ಅಧಿಕಾರದಲ್ಲಿ ದಲಿತರಿಗೆ ಅನ್ಯಾಯವಾದಾಗ ಸಚಿವನಾಗಿದ್ದ ನಾನು ಸಚಿವ ಸ್ಥಾನಕ್ಕ ರಾಜಿನಾಮೆ ನೀಡಲು ಮುಂದಾಗಿದ್ದೆ. ಮುಖ್ಯಮಂತ್ರಿ ಆಗಿದ್ದ ಜೆ.ಎಚ್. ಪಟೇಲ ಅವರೇ ತಡೆದು, ನ್ಯಾಯ ನೀಡಿದ್ದರು. ಈಗ ಎಸ್ಸಿ-ಎಸ್ಟಿ ಸಮುದಾಯಕ್ಕೆ ನೀಡಿರುವ ಅನುದಾನವನ್ನು ಸರ್ಕಾರ ಅನ್ಯ ಕೆಲಸಕ್ಕೆ ಬಳಸಿಕೊಂಡು ಅನ್ಯಾಯ ಮಾಡಿದ್ದು, ಸಚಿವ ಮಹಾದೇಪ್ಪ ಆಕ್ಷೇಪಿಸಬೇಕು ಎಂದು ಆಗ್ರಹಿಸಿದರು.