ಮನೆ ಅಂತಾರಾಷ್ಟ್ರೀಯ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಲ್ಟ್‌ ನ್ಯೂಸ್‌ನ ಝುಬೈರ್, ಪ್ರತೀಕ್ ಸಿನ್ಹಾ ನಾಮಕರಣ

ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಲ್ಟ್‌ ನ್ಯೂಸ್‌ನ ಝುಬೈರ್, ಪ್ರತೀಕ್ ಸಿನ್ಹಾ ನಾಮಕರಣ

0

ನಾರ್ವೆ: ನವದೆಹಲಿ: ಫ್ಯಾಕ್ಟ್‌ ಚೆಕಿಂಗ್‌ ವೆಬ್‌ಸೈಟ್‌ ‘ಆಲ್ಟ್‌ ನ್ಯೂಸ್’ ಸಹ ಸಂಸ್ಥಾಪಕರಾದ ಪತ್ರಕರ್ತ ಮೊಹಮ್ಮದ್‌ ಜುಬೇರ್‌ ಮತ್ತು ಪ್ರತೀಕ್ ಸಿನ್ಹಾ ಅವರು 2022ರ ನೊಬೆಲ್ ಶಾಂತಿ ಪ್ರಶಸ್ತಿ ಪಡೆಯುವ ಸ್ಪರ್ಧಿಗಳ ಪಟ್ಟಿಯಲ್ಲಿದ್ದಾರೆ.

ಇದೇ ಶುಕ್ರವಾರ ನಾರ್ವೆಯ ಸ್ಥಳೀಯ ಕಾಲಮಾನ 11 ಗಂಟೆಗೆ ನೊಬೆಲ್ ಶಾಂತಿ ಪುರಸ್ಕಾರ ಪ್ರಕಟ ಆಗಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಈ ಬಾರಿಯ ನೊಬೆಲ್ ಶಾಂತಿ ಪುರಸ್ಕೃತರ ಹೆಸರುಗಳು ಬಹಿರಂಗವಾಗಲಿದೆ. ಮಾನವತೆಗಾಗಿ ಶ್ರಮಿಸಿದ ಸಾಧಕರಿಗೆ ಪ್ರತಿ ವರ್ಷ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗುತ್ತದೆ.

ಭಾರತೀಯ ಪತ್ರಕರ್ತರಾದ ಪ್ರತೀಕ್ ಸಿನ್ಹಾ ಹಾಗೂ ಮೊಹಮ್ಮದ್ ಝುಬೈರ್ ಅವರು ಆಲ್ಟ್ ನ್ಯೂಸ್ ವೆಬ್ಸೈಟ್’ನ ಸಹ ಸಂಸ್ಥಾಪಕರಾಗಿದ್ದು, ಸುಳ್ಳು ಸುದ್ದಿ ವಿರುದ್ಧ, ವದಂತಿಗಳ ವಿರುದ್ಧ ಸಮರವನ್ನೇ ಸಾರಿದ್ದಾರೆ. ಸುದ್ದಿಯ ಸತ್ಯಾಂಶವನ್ನು ಜನತೆಯ ಮುಂದಿಡುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳು, ಸುಳ್ಳು ಸುದ್ದಿಗಳು, ಸಮುದಾಯದಲ್ಲಿ ದ್ವೇಷ ಹರಡುವ ಸುಳ್ಳು ಮಾಹಿತಿಗಳನ್ನು ಫ್ಯಾಕ್ಟ್ ಚೆಕ್ ಪರೀಕ್ಷೆಗೆ ಒಳಪಡಿಸಿ ಸುದ್ದಿ ಸತ್ಯಾಂಶವನ್ನು ಜನತೆಯ ಮುಂದಿಡುವ ಕೆಲಸವನ್ನು ಇವರಿಬ್ಬರೂ ಪತ್ರಕರ್ತರು ಮಾಡುತ್ತಿದ್ದಾರೆ. ಬಲಪಂಥೀಯ ಮನಸ್ಥಿತಿ ವಿರುದ್ದ ಹೋರಾಟ ನಡೆಸುತ್ತಿರುವ ಮೊಹಮ್ಮದ್ ಝುಬೈರ್ ಹಾಗೂ ಆಲ್ಟ್ ನ್ಯೂಸ್ ವಿರುದ್ಧ ಕಾನೂನು ಸಮರಗಳೇ ನಡೆದು ಹೋಗಿವೆ.

ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಝುಬೈರ್ ಅವರನ್ನು ದಿಲ್ಲಿ ಪೊಲೀಸರು ಕಳೆದ ಜೂನ್’ನಲ್ಲಿ ಬಂಧಿಸಿದ್ದರು. 4 ವರ್ಷಗಳ ಹಿಂದಿನ ಟ್ವೀಟ್’ನ ಆಧಾರದ ಮೇಲೆ ಅವರನ್ನು ಬಂಧಿಸಲಾಗಿತ್ತು. ಮೊಹಮ್ಮದ್ ಝುಬೈರ್ ಬಂಧನ ಖಂಡಿಸಿ ವಿಶ್ವಾದ್ಯಂತ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಕೂಡಾ ಪೊಲೀಸರ ನಡೆಯನ್ನು ಖಂಡಿಸಿತ್ತು. ರಾಷ್ಟ್ರೀಯವಾದದ ಭಾವನೆಗಳನ್ನು ಕೆರಳಿಸಿ ಸುಳ್ಳು ಸುದ್ದಿಗಳನ್ನು ಹರಡಿ ಕೋಮು ಧೃವೀಕರಣ ಮಾಡುವವರ ಪಾಲಿಗೆ ಆಲ್ಟ್ ನ್ಯೂಸ್ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ.

ಮೊಹಮ್ಮದ್ ಝುಬೈರ್ ಅವರ ಬಂಧನವಾದಾಗ ಈ ಘಟನೆಯನ್ನು ಭಾರತದ ಪತ್ರಿಕಾ ಸ್ವಾತಂತ್ರ್ಯದ ಹರಣ ಎಂದೇ ಬಣ್ಣಿಸಲಾಗಿತ್ತು. ಸರ್ಕಾರವು ಪತ್ರಕರ್ತರಿಗೆ, ವರದಿಗಾರರಿಗೆ ಒಂದು ರೀತಿಯ ಅಭದ್ರತೆಯ ವಾತಾವರಣ ನಿರ್ಮಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಈ ಎಲ್ಲಾ ಘಟನೆಗಳ ಬಳಿಕ ಜುಲೈ 20 ರಂದು ಸುಪ್ರೀಂ ಕೋರ್ಟ್ ಮೊಹಮ್ಮದ್ ಝುಬೈರ್ ಅವರಿಗೆ ಜಾಮೀನು ನೀಡಿತ್ತು.

ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾರತದ ಇಬ್ಬರು ಪತ್ರಕರ್ತರು ಮಾತ್ರವಲ್ಲ, ಹಲವು ದೇಶಗಳ ಜನಪ್ರತಿನಿಧಿಗಳು, ಹಿರಿಯ ರಾಜಕಾರಣಿಗಳು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ವಿವಿಧ ಪರಿಸರ ಕಾರ್ಯಕರ್ತರೂ ಕೂಡಾ ನಾಮಾಂಕಿತರಾಗಿದ್ಧಾರೆ.