ಬೆಂಗಳೂರು: ಅಂಬರೀಶ್ ಸ್ಮಾರಕ ಕಾರ್ಯ ಪೂರ್ಣಗೊಂಡಿದ್ದು, ಮಾರ್ಚ್ ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ರಿಂಗ್ ರಸ್ತೆಗೆ ಡಾ. ಪುನೀತ್ ರಾಜಕುಮಾರ ರಸ್ತೆ ಎಂದು ನಾಮಕರಣ ಮಾಡಿ ನಂತರ ಬಾನ ದಾರಿಯಲ್ಲಿ ಪುನೀತ್ ಪಯಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಿವಂಗತ ಪುನೀತ್ ರಾಜಕುಮಾರ್ ಅವರ ಸಮಾಧಿಯನ್ನು ಅದ್ಬುತ ಸ್ಮಾರಕ ಮಾಡಲಾಗುವುದು ಎಂದರು.
ಬೆಂಗಳೂರು ಒಂದು ಅಭಿವೃದ್ದಿ ಪರ ನಗರ, ಇದರ ಬ್ರಾಂಡ್ ನೇಮ್ ಉಳಿಸಬೇಕು. ಕೆಲವರು ಇದರ ಹೆಸರು ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ವಿಶ್ವ ಖ್ಯಾತಿ ಪಡೆದ ಆರ್ ಆಂಡ್ ಡಿ ಕೇಂದ್ರಗಳಿವೆ. ಪ್ರತಿ ದಿನ ಐದು ಸಾವಿರ ತಜ್ಞರು ಈ ನಗರಕ್ಕೆ ಬರುತ್ತಾರೆ. ಈ ನಗರದ ಅಭಿವೃದ್ದಿಗೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ನಗರದ ಎಲ್ಲ ಕ್ಷೇತ್ರಗಳು ಅಭಿವೃದ್ಧಿ ಆಗಿವೆ. ಇದರ ಹೆಸರು ಕೆಡಿಸಲು ಕೆಲವರು ಪ್ರಯತ್ನ ನಡೆಸಿದ್ದಾರೆ ಎಂದರು.
ಅಶೋಕ್ ಅವರು ಬೆಂಗಳೂರಿನಲ್ಕಿ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇಲ್ಲಿನ ಅಭಿವೃದ್ಧಿ ಕೆಲಸವನ್ನು ತಾವೇ ಮುಂದೆ ನಿಂತು ನೋಡುತ್ತಿರುವುದು ಸಂತಸದ ವಿಷಯ. ಅಶೋಕ ಅವರು ಜನ ಉಪಯೋಗಿ ಶಾಸಕರು. ಅವರಿಗೆ ಈ ಕ್ಷೇತ್ರದ ಜನರು ಸದಾಕಾಲ ಆಶೀರ್ವಾದ ಮಾಡಬೇಕು ಎಂದು ಹೇಳಿದರು.
ನನ್ನ ಆತ್ಮೀಯ ಸ್ನೇಹಿತ ಅಂಬರೀಶ್ ಅವರ ಹೆಸರನ್ನು ರೇಸ್ ಕೋರ್ಸ್ ರಸ್ತೆಗೆ ಇಡಲು ತೀರ್ಮಾನಿಸಿದ್ದೇನೆ. ಅವನು ಕೊಡುಗೈ ದಾನಿ. ಅವನ ಸ್ಮಾರಕ ಮಾಡುವ ಸೌಭಾಗ್ಯ ನನ್ನದು ಎಂದರು.
ಅಂಬರೀಶ್ , ರಾಜಕುಮಾರ್, ವಿಷ್ಣುವರ್ಧನ, ಶಂಕರನಾಗ್ ಅಪ್ಪು ಇವರೆಲ್ಲ ನಮ್ಮನ್ನು ರಂಜಿಸಲು ಬಂದಿದ್ದರು ಎನಿಸುತ್ತದೆ. ಜೊತೆಗೆ ನಮ್ಮೆಲ್ಲರಿಗೆ ಪ್ರೀತಿ ಬಿಟ್ಟು ಹೊಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಂದಾಯ ಸಚಿವರಾದ ಆರ್. ಅಶೋಕ್, ಸಂಸದ ತೇಜಸ್ವಿಸೂರ್ಯ, ಶಾಸಕರಾದ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ, ಉದಯ ಗರುಡಾಚಾರ್, ಎಂ.ಕೃಷ್ಣಪ್ಪ, ನಟ ರಾಘವೇಂದ್ರ ರಾಜಕುಮಾರ್, ಅಭಿಷೇಕ್ ಅಂಬರೀಶ್ ಹಾಗೂ ಮತ್ತಿತರ ಗಣ್ಯರು ಹಾಜರಿದ್ದರು.