ಬೆಂಗಳೂರು: ಬಿಜೆಪಿ ನಾಯಕರ ಹಳೆಯ ಹೇಳಿಕೆಗಳು, ಅವುಗಳಿಗೆ ಸಂಬಂಧಿಸಿದ ವಿಡಿಯೋ ತುಣುಕಗಳನ್ನೇ ಮುಂದಿಟ್ಟುಕೊಂಡು ವಾಗ್ದಾಳಿ ನಡೆಸುತ್ತಿದ್ದ ಸಚಿವ ಪ್ರಿಯಾಂಕ್ ಖರ್ಗೆಗೆ ಅದೇ ಧಾಟಿಯಲ್ಲಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ತಿರುಗೇಟು ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತರು ಕಲಬುರಗಿ ಜಿಲ್ಲೆಗೆ ಕಾಲಿಡಂತೆ ಮಾಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದ ಹಳೆಯ ವಿಡಿಯೋ ತುಣುಕನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಶೋಕ್, ಅಂಬೇಡ್ಕರ್ ಸಂವಿಧಾನ ಕಲಬುರಗಿಯಲ್ಲಿ ಅನ್ವಯವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ರಿಪಬ್ಲಿಕ್ ಆಫ್ ಕಲಬುರ್ಗಿಯ ನಿಜಾಮ ಜನಾಬ್ ಪ್ರಿಯಾಂಕ್ ಖರ್ಗೆ ಅವರು ಹೊರಡಿಸಿರುವ ಫತ್ವಾ ಏನು ಅಂತ ಒಮ್ಮೆ ಕೇಳಿ: “ಖರ್ಗೆ ಕುಟುಂಬದವರು ಮನಸ್ಸು ಮಾಡಿದರೆ ಬಿಜೆಪಿ ಕಾರ್ಯಕರ್ತರು ಕಲಬುರ್ಗಿ ಜಿಲ್ಲೆಗೆ ಕಾಲು ಇಡುವುದಕ್ಕೂ ಬಿಡುವುದಿಲ್ಲವಂತೆ!” ಜನಾಬ್ ಪ್ರಿಯಾಂಕ್ ಖರ್ಗೆ ಅವರೇ, ಎರಡು ಬಾರಿ ಸಚಿವರಾದ ಮಾತ್ರಕ್ಕೆ ತಾವು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗಿಂತ ದೊಡ್ಡವರೂ ಅಂದುಕೊಂಡು ಬಿಟ್ಟಿದ್ದೀರಾ? ಅಂಬೇಡ್ಕರ್ ಅವರ ಸಂವಿಧಾನ ಕಲಬುರ್ಗಿಯಲ್ಲಿ ಅನ್ವಯ ಆಗುವುದಿಲ್ಲವೇ? ಅಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು ಸಿಗುವುದಿಲ್ಲವೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ತಾವೂ ನಿಜಾಮರೂ ಅಲ್ಲ, ತಮ್ಮ ಹಿಂಬಾಲಕರು ರಜಾಕರರೂ ಅಲ್ಲ. ಅಧಿಕಾರದ ಮದದಲ್ಲಿ ಮೈಮರೆತು ತಾವೂಬ್ಬ ಜನಪ್ರತಿನಿಧಿ, ಜನಸೇವಕ ಅನ್ನೋದನ್ನು ಮರೆಯಬೇಡಿ ಎಂದು ಅಶೋಕ್ ಕಿಡಿಕಾರಿದ್ದಾರೆ.
ಬಿಜೆಪಿ ನಾಯಕರು ಸಂವಿಧಾನದ ಬಗ್ಗೆ ಹಿಂದೆ ನೀಡಿದ್ದ ಹೇಳಿಕೆಗಳನ್ನೇ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ತೊಡಗಿ ಇತರ ಕಾಂಗ್ರೆಸ್ ನಾಯಕರು ಕೇಸರಿ ಪಡೆ ನಾಯಕರ ವಿರುದ್ಧ ವಾಗ್ದಾಳಿ ನಡೆಸುವುದು ಆಗಾಗ ವರದಿಯಾಗುತ್ತಿರುತ್ತದೆ. ಇದೀಗ ಅದೇ ರೀತಿಯಲ್ಲಿ ಅಶೋಕ್ ಕೂಡ ತಿರುಗೇಟು ನೀಡಿದ್ದಾರೆ.
ಬಿಜೆಪಿಯ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನದ ಬಗ್ಗೆ ನೀಡಿದ್ದ ಹೇಳಿಕೆಯನ್ನು ಪ್ರಿಯಾಂಕ್ ಖರ್ಗೆ ಹಲವು ಬಾರಿ ಉಲ್ಲೇಖಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತದೆ ಎಂದು ಆರೋಪಿಸಿದ್ದರು. ಈಗ ಅದೇ ಖರ್ಗೆಯವರು ಅವರ ಜಿಲ್ಲೆಯಲ್ಲೇ ಸಂವಿಧಾನ ಪಾಲನೆ ಮಾಡುವುದಿಲ್ಲವೇ ಎಂದು ಅಶೋಕ್ ಹಳೆಯ ವಿಡಿಯೋ ಪೋಸ್ಟ್ ಮಾಡಿ ಪ್ರಶ್ನಿಸಿದ್ದಾರೆ.














