ಮನೆ ಸ್ಥಳೀಯ ಅಂಬೇಡ್ಕರ್ ಅವರ ವ್ಯಕ್ತಿತ್ವ ಎಲ್ಲರಿಗೂ ಸ್ಫೂರ್ತಿ: ಕಲ್ಯಾಣ ಶ್ರೀ ಬಂತೇಜಿ

ಅಂಬೇಡ್ಕರ್ ಅವರ ವ್ಯಕ್ತಿತ್ವ ಎಲ್ಲರಿಗೂ ಸ್ಫೂರ್ತಿ: ಕಲ್ಯಾಣ ಶ್ರೀ ಬಂತೇಜಿ

0

ಮೈಸೂರು: ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರಾಷ್ಟ್ರನಾಯಕರಾದ ಡಾ.ಬಿ.ಆರ್.ಅಂಬೇಡ್ಕರ್ ರವರ 68 ನೇ ಮಹಾಪರಿನಿರ್ವಾಣ ಕಾರ್ಯಕ್ರಮದ ಪ್ರಯುಕ್ತ ಟೌನ್ ಹಾಲ್ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮೀ ಕಾಂತ ರೆಡ್ಡಿ ಅವರು ನಮನ ಸಲ್ಲಿಸಿದರು.

Join Our Whatsapp Group

ಕಾರ್ಯಕ್ರಮದಲ್ಲಿ ಕಲ್ಯಾಣ ಶ್ರೀ ಬಂತೇಜಿ ಅವರು ಮಾತನಾಡಿ, ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಭೌತಿಕವಾಗಿ ಕಳೆದುಕೊಂಡ ಈ ಮಹಾ ಪರಿನಿರ್ವಾಣ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿವಿಧ ಭಾಷೆ, ವಿವಿಧ ಜನಾಂಗ ಹಾಗೂ ಸಂಸ್ಕೃತಿಯನ್ನು ಹೊಂದಿರುವ ನಮ್ಮ ಭಾರತದ ನೆಲಕ್ಕೆ ಅಲ್ಲಿನ ಜನರಿಗೆ ಸಮಾನತೆಯನ್ನು ಸಾರುವ ಸಂವಿಧಾನವನ್ನು ನೀಡಿದವರು ಅಂಬೇಡ್ಕರ್  ಅವರ ಆದರ್ಶ ಹಾಗೂ ವ್ಯಕ್ತಿತ್ವ ಎಂದಿಗೂ ಎಲ್ಲರಿಗೂ ಸ್ಫೂರ್ತಿ ಎಂದು ಹೇಳಿದರು.

ಈ 68 ನೇ ಪುಣ್ಯಸ್ಮರಣೆಯ ದಿನ ಬಾಬಾ ಸಾಹೇಬರರ ಚಿಂತನೆ ಹಾಗೂ ಸಾಮಾಜಿಕ ಮೌಲ್ಯಗಳಿಗೆ ಬೆಲೆಕೊಡಬೇಕು. ನಮ್ಮ ದೇಶದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಇದ್ದು, ನಗರದ ಜೀವನಕ್ಕೆ ಒಗ್ಗಿಕೊಂಡು ಸಾಮಾಜಿಕ ವ್ಯವಸ್ಥೆ ಸುಧಾರಣೆ ಕಂಡಿದ್ದರೂ ಸಹ ಮಾನಸಿಕ ವ್ಯವಸ್ಥೆ ಸುಧಾರಣೆ ಗೊಂಡಿಲ್ಲ. ಎಲ್ಲಿಯವರೆಗೂ ಜಾತಿ ಹಾಗೂ ತಾರತಮ್ಯ ಹೋಗುವುದಿಲ್ಲವೋ, ನಮ್ಮಲ್ಲಿ ಮಾನವೀಯ ಗುಣಗಳು ಬರುವುದಿಲ್ಲವೋ  ಅಲ್ಲಿಯವರೆಗೂ  ನಮಗೆ ನಿಜವಾದ ಸ್ವತಂತ್ರ ಸಿಗುವುದಿಲ್ಲ. ಎಲ್ಲರೂ ಸಂತೋಷದ ಜೀವನವನ್ನು ಬಯಸುತ್ತೇವೆ ಆದರೇ ನಾವು ಆ ನಿಟ್ಟಿನಲ್ಲಿ ಯಾವುದೇ ಮಾರ್ಗವನ್ನು ಪಾಲಿಸುವುದಿಲ್ಲ ಹಾಗಾಗಿಯೇ ಭ್ರಾತೃತ್ವದ ಭಾವನೆಯಿಂದ ಬದುಕಬೇಕಾದಂತಹ ನಮ್ಮ ಸಮಾಜದಲ್ಲಿ ಇಂದು ಜಾತಿ ಕಾರ್ಯಕ್ರಮವು ತಾಂಡವವಾಡಿ ಮೇಲುಕೀಳೆಂಬ ಭಾವನೆಯನ್ನು ಮೂಡಿಸುತ್ತಿದೆ ಎಂದರು.

ಮನುಷ್ಯರಾದ ನಾವು ಬೇರೆಯವರನ್ನು ನಿಂದಿಸುವ ಬದಲು ನಮ್ಮ ತಪ್ಪುಗಳನ್ನು ನಾವು ತಿದ್ದಿ ನಡೆಯಬೇಕು. ಅದಕ್ಕೆ ಮೊದಲು ಪ್ರಾಧಾನ್ಯತೆ ನೀಡಿದರೆ ಮತ್ತೊಬ್ಬರ ತಪ್ಪನ್ನು ತಿದ್ದಲು ಸಾಧ್ಯ. ಅನ್ಯರನ್ನು ಹಿಂದಿಕ್ಕಲು ನೋಡಬಾರದು ಹಾಗೂ ಮತ್ತೊಬ್ಬರು ಮಾಡುವ ಟೀಕೆಗೆ ಕಿವಿಗೋಡದೆ ತಮ್ಮ ಸಾಧನೆಯ ಕಡೆ ಗಮನ ನೀಡಿ ಯಶಸ್ಸಿನೆಡೆಗೆ ಸಾಗಬೇಕು. ಪ್ರತಿದಿನವೂ ಸಮಾಜವು ಒಂದಲ್ಲ ಒಂದು ರೀತಿಯ ಪಾಠವನ್ನು ಕಲಿಸುತ್ತದೆ. ಅದರಲ್ಲಿ ತಪ್ಪು-ಸರಿಯನ್ನು ಆಯ್ಕೆ ಮಾಡಿ ಯೋಚಿಸಿ ಮುನ್ನಡೆಯಬೇಕು. ಮತ್ತೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡಿ ಕೆಡುಕು ತರಬಾರದು ಎಂದು ಸಲಹೆ ನೀಡಿದರು.

 ತೀಕ್ಷ್ಣವಾದ, ಪ್ರಭುದ್ದವಾದಂತ ಮನಸ್ಥಿತಿಯನ್ನು ಹೊಂದಿದ್ದ ಬಾಬಾ ಸಾಹೇಬರು ಪಂಚ ಶೀಲದ ಪ್ರತಿರೂಪವಾಗಿದ್ದಾರೆ. ಅವರ ಜೀವನದುದ್ದಕ್ಕೂ ಯಾವುದೇ ಒಂದು ಕಪ್ಪು ಕಳೆಯಿಲ್ಲದಂತೆ ಬದುಕಿ, ನಮ್ಮಂತಹ ಅವರ ಮುಂದಿನ ಪೀಳಿಗೆಗಳಿಗೆ ಒಳ್ಳೆಯ ಮಾರ್ಗದರ್ಶಕರಾಗಿ ನೆಲೆಸಿದ್ದಾರೆ. ಹಿಂದುಳಿದವರಿಗೆ, ಬಡವರಿಗೆ, ಸಾಮಾಜಿಕವಾಗಿ ಹಿಂದುಳಿದವರಿಗೆ ಹಾಗೂ ಸಮಾಜದ ಎಲ್ಲರಿಗೂ ಅನ್ವಯವಾಗುವಂತೆ ಉಪಯೋಗವಾಗುವಂತೆ ಪ್ರಭುದ್ದವಾದ ಭಾರತದ ನಿರ್ಮಾಣಕ್ಕಾಗಿ ಪ್ರಭುದ್ದವಾದ ಸಂವಿಧಾನ ನೀಡಿದ್ದಾರೆ. ಅವರ ಆಶಯಗಳನ್ನು ಅನುಸರಿಸಿಕೊಂಡು ನಡೆಯಬೇಕು. ಕೆಲವ ಕಾಲ್ಪನಿಕ ಅನುಯಾಯಿಗಳಾಗದಂತೆ ಜೀವನದುದ್ದಕು ಅವರ ಆದರ್ಶಗಳನ್ನು ಅನುಸರಿಸಿಕೊಂಡು ನಡೆಯಬೇಕು ಆಗ ಮಾತ್ರವೇ ನಾವು ಅವರಿಗೆ ಪರಿಪೂರ್ಣವಾದ ಗೌರವವನ್ನು ನೀಡಲು ಸಾಧ್ಯ ಎಂದು ಹೇಳಿದರು.

ಎಲ್ಲರಲ್ಲಿಯೂ ಎಚ್ಚರಿಕೆ ಹಾಗೂ ಜಾಗೃತಿಯ ಗುಣವಿರಬೇಕು. ಜೀವನದಲ್ಲಿ ಎಚ್ಚರಿಕೆ ಬಹಳ ಮುಖ್ಯ ಈ ಗುಣ ಹೊಂದಿರುವವರು ಎಂದಿಗೂ ಸಾಯುವುದಿಲ್ಲ. ಈ ಜೀವನದ ಕಲೆಯನ್ನು ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸಬೇಕು. ನಮ್ಮಲ್ಲಿರುವ ವ್ಯಾಮೋಹ, ನಾನು ನನ್ನದೆನ್ನುವ ಅಹಂ ತೊರೆದು ಬದುಕಬೇಕು. ಪರಿಶುದ್ಧತೆ ಯಾರಲ್ಲಿರುವುದೋ ಅವರನ್ನು ಯಶಸ್ಸು ಹಿಂಬಾಲಿಸುತ್ತದೆ. ನಾವು ಯಾವುದೇ ಸ್ಥಿತಿಯಲ್ಲಿ ಇದ್ದರು ತಮ್ಮ ವ್ಯಕ್ತಿತ್ವ ಸಮಾಜಕ್ಕೆ ಕೀರ್ತಿ ತರುವಂತಿರಬೇಕು. ಜಗತ್ತಿನ ಕೆಟ್ಟ ವಿಚಾರಗಳಿಗೆ ಮೈಗೋಡದೆ ಒಳ್ಳೆಯ ಕೆಲಸದತ್ತ ಮುನ್ನಡೆಯಬೇಕು ಆಗ ಮಾತ್ರವೇ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಎಂತಹ ಸಂದರ್ಭದಲ್ಲಿಯೂ ಸಜ್ಜನರ ಸಂಘವನ್ನು ಮಾಡಬೇಕು ಇಲ್ಲವಾದರೆ ಒಬ್ಬಂಟಿಯಾಗಿ ಒಳ್ಳೆಯ ಮನಸ್ಸಿನಿಂದ ಜೀವನ ನಡೆಸಬೇಕು. ಕೆಟ್ಟ ಮನಸ್ಸಿನಿಂದ ಉಂಟಾಗುವ ಸಮಸ್ಯೆ ಯಾವುದೇ ಬೇರೊಬ್ಬರ ವ್ಯಕ್ತಿಯಿಂದ ಆಗುವುದಿಲ್ಲ. ಈ ಅಂಶಗಳನ್ನು  ಪರಿಪಾಲನೆ ಮಾಡುವವರು ಸಂಘರ್ಷದ ಜೀವನದಿಂದ ಸಂತೋಷದ ಜೀವನದೆಡೆ ನಡೆಯುತ್ತಾರೆ ಎಂದರು.

ನಮ್ಮ ದೇಶದಲ್ಲಿ ಧಾರ್ಮಿಕವಾಗಿ ಸಾಮಾಜಿಕವಾಗಿ ಸ್ವತಂತ್ರವನ್ನು ಇನ್ನೂ ಪಡೆದಿಲ್ಲ. ಅದು ಸಿಗಬೇಕೆಂದರೆ ಭಾರತೀಯರೆಲ್ಲರೂ ಸಹೋದರತೆಯಿಂದ ಬದುಕಬೇಕು. ಯಾವುದೇ ವ್ಯಕ್ತಿಯನ್ನು ಜಾತಿ -ಧರ್ಮ ಹಾಗೂ ವರ್ಣದಿಂದ ಅಳೆಯದೆ. ಪ್ರೀತಿಯಿಂದ ಭ್ರಾತೃತ್ವ   ಭಾವನೆಯಿಂದ ಕಾಣಬೇಕೆಂಬುದೇ ಅಂಬೇಡ್ಕರ್ ಅವರ ಆಶಯ.  ಇಂದು ಪ್ರಪಂಚದಾದ್ಯಂತ ಸುಭಧ್ರವಾಗಿ ನಿಂತಿರುವ ಅವರ ಪರಿಪೂರ್ಣವಾದ ವ್ಯಕ್ತಿತ್ವ ಎಲ್ಲರಿಗೂ ಆದರ್ಶ. ಬುದ್ಧ ಎಂಬ ಸುಜ್ಞಾನ ಸಾಗರಕ್ಕೆ ಮಹಾ ನದಿಯಾಗಿರುವುದು ಬಾಬಾ ಸಾಹೇಬರು, ಅವರೊಂದಿಗೆ ನಾವು ಉಪ ನದಿಗಳಾಗಿ ಸೇರಿ,  ಪ್ರಬುದ್ಧ ಸಂವಿಧಾನವನ್ನು ಅನುಸರಿಸೋಣ ಎಂದರು.

ಈ ಸಂದರ್ಭದಲ್ಲಿ ಡಾ. ಕಲ್ಯಾಣ ಶ್ರೀ ಬಂತೇಜಿ ಹಾಗೂ ಭೋದಿ ರತ್ನ ಬಂತೇಜಿ ಅವರು ಬುದ್ಧ ವಂದನೆ, ಧಮ್ಮ ವಂದನೆ ಹಾಗೂ ಸಂಘ ವಂದನೆಯನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ. ಎಂ. ಗಾಯತ್ರಿ, ಜಿಲ್ಲಾ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಆಶಾದ್ ಉರ್ ರೆಹಮಾನ್ ಶರೀಫ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.