ಬೆಳಗಾವಿ: ಸ್ವಾಯತ್ತ ಸರ್ಕಾರಿ ವೈದ್ಯಕೀಯ ವಿಜ್ಞಾನ ಕಾಲೇಜುಗಳ ಬೋಧಕೇತರ ಸಿಬ್ಬಂದಿಗಳಿಗೆ ಮುಂಬಡ್ತಿ ಮತ್ತು ನೇಮಕಾತಿ ನೀಡುವ ಕುರಿತು ಹಾಲಿ ಇರುವ ವೃಂದ ಮತ್ತು ನೇಮಕಾತಿ( ಸಿ ಅಂಡ್ ಆರ್) ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಸೋಮವಾರ ವಿಧಾನಪರಿಷನಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇ ಗೌಡರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯಗಳಡಿ ಬರುವ ಸರ್ಕಾರಿ ವೈದ್ಯಕೀಯ ವಿಜ್ಞಾನ ಕಾಲೇಜುಗಳ ಸಿಬ್ಬಂದಿಗಳ ನೇಮಕಾತಿ, ಜೇಷ್ಠತೆ, ಪದೋನ್ನತೆ ಮತ್ತು ಬಡ್ತಿ ನೀಡುವ ಸಂಬಂಧ ಹಾಲಿ ಇರುವ ನಿಯಮಕ್ಕೆ ತಿದ್ದುಪಡಿ ಮಾಡಲಾಗುವುದು. ಒಂದು ತಿಂಗಳೋಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಬೋಧಕೇತರ ಸಿಬ್ಬಂದಿಗಳಿಗೆ ಬಡ್ತಿ ಮತ್ತು ನೇಮಕ ಮಾಡುವ ಕುರಿತು ಇದುವರೆಗೂ ಸಿ ಅಂಡ್ ಆರ್ ನಿಯಮಕ್ಕೆ ಯಾರೂ ಕೂಡ ತಿದ್ದುಪಡಿ ಮಾಡಿರಲಿಲ್ಲಘಿ. ನಾವು ಸಚಿವರಾದ ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದೇವೆ. ಈಗಾಗಲೇ ಗ್ರೂಪ್ ಎ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಪಾಟೀಲ್ ವಿವರಿಸಿದರು.
ಗ್ರೂಪ್ ಬಿ, ಸಿ ಮತ್ತು ಡಿ ಸಿಬ್ಬಂದಿಗಳಿಗೆ ಇದೇ ನಿಯಮಗಳನ್ನು ಅಳವಡಿಸಿಕೊಳ್ಳುವ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಇದರ ಬಗ್ಗೆ ಕಾನೂನು ಮತ್ತು ಆರ್ಥಿಕ ಇಲಾಖೆಯವರು ನಮ್ಮ ಇಲಾಖೆಯಿಂದ ಸ್ಪಷ್ಟನೆ ಕೇಳಿದ್ದಾರೆ. ವರದಿ ಸಲ್ಲಿಕೆಯಾಗಿ ಎರಡು ಇಲಾಖೆಗಳಿಂದ ಯಾವ ಸೂಚನೆ ಬರುತ್ತದೆಯೋ ಅದರಂತೆ ಮುಂದಿನ ಕ್ರಮ ಜರುಗಿಸಲಿದ್ದೇವೆ ಎಂದರು.
ಒಂದೊಂದು ಸಂಸ್ಥೆಗಳಲ್ಲಿ ಒಂದೊಂದು ರೀತಿಯಾಗಿ ಪ್ರಕ್ರಿಯೆ ನಡೆಯುವುದರಿಂದ ಇದಕ್ಕೆ ಸಂಪೂರ್ಣ ಕಡಿತ ಹಾಕಿ ಏಕರೂಪ ನೀತಿಯನ್ನು ರೂಪಿಸಲಾಗುತ್ತದೆ. ಇದೇ 22ರಂದು ಇನ್ನೊಂದು ಸುತ್ತಿನ ಸಭೆ ಇದೆ. ಅಂತಿಮವಾಗಿ ಎಲ್ಲ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಸೂಕ್ತವಾದ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿರುವ ಖಾಯಂ ನೌಕರರಿಗೆ ಆರೋಗ್ಯ ಜ್ಯೋತಿ ಸಂಜೀವಿನಿ ಯೋಜನೆಯನ್ನು ಅಳವಡಿಸಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದರು.