ಉಡುಪಿ : ಅಧಿವೇಶನದಲ್ಲಿ ಗೋವು ಸಂರಕ್ಷಣಾ ಕಾಯ್ದೆ 2020 ತಿದ್ದುಪಡಿಗೆ ಮುಂದಾದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಶ್ವ ಹಿಂದೂ ಪರಿಷತ್ ಕಿಡಿಕಾರಿದೆ. ಇದು ಗೋವು ಕಳ್ಳರಿಗೆ ಸಹಕರಿಸುವ ನೀತಿ. ಸೋಮವಾರ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಮುಖಂಡ ಸುನೀಲ್ ಕೆ.ಆರ್ ಮಾತನಾಡಿ, ಗೋವು ಸಂರಕ್ಷಣಾ ಕಾಯ್ದೆ ಸಡಿಲಗೊಳಿಸಿ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಕ್ಯಾಬಿನೆಟ್ ಸಭೆಯಲ್ಲಿ ಈ ವಿಚಾರ ಪಾಸಾಗಿದ್ದು, ಕೂಡಲೇ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯಿರಿ ಎಂದು ಒತ್ತಾಯಿಸಿದ್ದಾರೆ.
ಕಾಯ್ದೆಯ ಸೆಕ್ಷನ್ 8 ರ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅವಕಾಶ ಇತ್ತು. ಅಕ್ರಮ ಗೋ ಸಾಗಾಟ ವಾಹನ ವಶಪಡಿಸಿಕೊಂಡಾಗ, ಬ್ಯಾಂಕ್ ಗ್ಯಾರಂಟಿ ಕೊಡಬೇಕಾಗಿತ್ತು. ವಾಹನದ ಮೌಲ್ಯದಷ್ಟೇ ಬ್ಯಾಂಕ್ ಗ್ಯಾರಂಟಿ ಕೊಟ್ಟರೆ ತಾತ್ಕಾಲಿಕ ಬಿಡುಗಡೆಗೆ ಅವಕಾಶವಿತ್ತು. ಪ್ರಕರಣದ ಅಪರಾಧ ಸಾಬೀತಾದರೆ ವಾಹನ ವಾಪಸ್ ತಂದು ಸರ್ಕಾರ ಮುಟ್ಟುಗೋಲು ಹಾಕುತ್ತಿತ್ತು. ತಪ್ಪಿದಲ್ಲಿ ಬ್ಯಾಂಕ್ ಗ್ಯಾರಂಟಿ ಹಣವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತಿತ್ತು. ಸರ್ಕಾರ ಈ ಎಲ್ಲ ನಿಯಮಗಳನ್ನು ಬದಲಾವಣೆ ಮಾಡಲು ಹೊರಟಿದೆ ಎಂದರು.
ಇದರಿಂದ ಅಕ್ರಮ ಗೋ ಸಾಗಾಟಕ್ಕೆ ಕರಾವಳಿ ಭಾಗದಲ್ಲಿ ಕಡಿವಾಣ ಬಿದ್ದಿದೆ. ಈ ಷರತ್ತಿನಿಂದ ಕೋ ವಂಶದ ರಕ್ಷಣೆಗೆ ಕಾರಣವಾಗಿದೆ. ಈ ಬ್ಯಾಂಕ್ ಗ್ಯಾರಂಟಿ ಸಿಸ್ಟಮ್ ವಾಪಸ್ ಪಡೆಯಲು ಸರ್ಕಾರ ಮುಂದಾಗಿದೆ. ಬ್ಯಾಂಕ್ ಗ್ಯಾರಂಟಿ ಕೊಡಲು ಗೋವು ಕಳ್ಳರಿಗೆ ಕಷ್ಟವಾಗುತ್ತದೆ ಎಂದು ಅಸಂಬದ್ಧ ನೆಪ ಒಡ್ಡಲಾಗಿದೆ. ಇದರಿಂದ ಪೊಲೀಸ್ ಇಲಾಖೆ ಬಲಹೀನಗೊಳ್ಳಲಿದೆ. ಗೋ ಸಾಗಾಟಗಾರರ ಮೇಲೆ ಸಿದ್ದರಾಮಯ್ಯಗೆ ಯಾಕಿಷ್ಟು ಪ್ರೀತಿ ಎಂದು ಪ್ರಶ್ನಿಸಿದರು.
ಮಂಗಳೂರು ಭೇಟಿ ಸಂದರ್ಭಗಳಲ್ಲಿ ಗೋ ಕಳ್ಳರ ಮಾಫಿಯಾ ಸಿಎಂಗೆ ಮನವಿ ಮಾಡಿರಬೇಕು. ಇದರಿಂದಾಗಿ ಸರ್ಕಾರ ಈ ನಿರ್ಧಾರ ಕೈಗೊಳ್ಳುತ್ತಿದೆ. ಗೋವು ಕಳ್ಳ ಸಾಗಣೆದಾರರೊಂದಿಗೆ ನಾವಿದ್ದೇವೆ ಎನ್ನುತ್ತಿದೆ. ಇದರಿಂದ ಗೋವುಗಳ ಅಕ್ರಮ ಸಾಗಾಟ ಹೆಚ್ಚಾಗಲಿದೆ. ತಿದ್ದುಪಡಿಯಿಂದ ರಾಜ್ಯದ ಜನರನ್ನು ಉದ್ವಿಗ್ನಗೊಳಿಸಲು ಸರ್ಕಾರ ಪ್ರಚೋದನೆ ನೀಡಿದೆ ಎಂದು ಟೀಕಿಸಿದರು.
ಈ ತಿದ್ದುಪಡಿಯನ್ನು ತಕ್ಷಣ ಹಿಂಪಡೆಯಲು ಒತ್ತಾಯಿಸಿ ಪ್ರತಿಭಟನೆ ಮಾಡುತ್ತೇವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೋಮವಾರ ಪ್ರತಿಭಟನೆ ನಡೆಯಲಿದೆ. ದ್ವೇಷ ಭಾಷಣ ವಿರುದ್ಧ ಕಠಿಣ ಕಾನೂನು ಕ್ರಮ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಸತ್ಯ ಹೇಳಲು ಹೊರಟ ಹಿಂದೂ ಸಂಘಟನೆಗಳನ್ನು ಹತ್ತಿಕ್ಕುವ ನೀತಿ. ಹಿಂದೂ ಸಂಘಟನೆಗಳನ್ನು ರಾಜ್ಯ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂದರು.














