ನವದೆಹಲಿ: ಮೂರು ದಿನಗಳಿಂದ ನಡೆಯುತ್ತಿದ್ದ ಭಾರತ-ಪಾಕಿಸ್ತಾನ ನಡುವಿನ ಸೇನಾ ಕಾರ್ಯಾಚರಣೆ ನಿಲ್ಲಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ. ಆದರೆ, ಭಯೋತ್ಪಾದನೆ ವಿರುದ್ಧ ಭಾರತದ ನಿಲುವಿನಲ್ಲಿ ಯಾವುದೇ ರಾಜಿ ಇಲ್ಲ. ಅದು ಮುಂದುವರೆಯುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಶನಿವಾರ ಹೇಳಿದ್ದಾರೆ.
ಕದನ ವಿರಾಮ ಒಪ್ಪಂದದ ನಂತರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಜೈಶಂಕರ್, ಭಾರತ ಮತ್ತು ಪಾಕಿಸ್ತಾನ ಶನಿವಾರ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆ ನಿಲ್ಲಿಸುವ ಕುರಿತು ಪರಸ್ಪರ ಒಮ್ಮತಕ್ಕೆ ಬಂದಿವೆ. ಆದರೆ, ಭಾರತ ಯಾವುದೇ ಮಾದರಿಯ ಭಯೋತ್ಪಾದನೆ ಮತ್ತು ಸೂಚನೆಗಳ ವಿರುದ್ಧ ರಾಜಿಯಾಗದ ನಿಲುವನ್ನು ಸ್ಥಿರವಾಗಿ ನಿರ್ವಹಿಸುತ್ತಿದೆ. ಅದು ಮುಂದುವರಿಯುತ್ತದೆ ಎಂದು ಬರೆದುಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮವನ್ನು ಭಾರತ ದೃಢಪಡಿಸಿದೆ.
ಶನಿವಾರ ಸಂಜೆ ೫ ಗಂಟೆಯಿಂದ ಕದನ ವಿರಾಮ ಜಾರಿಗೆ ಬರಲಿದೆ. ಎರಡು ದೇಶಗಳ ನಡುವೆ ನೇರವಾಗಿ ಒಪ್ಪಂದಕ್ಕೆ ಬಂದಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿರುವ ಬಗ್ಗೆ ವರದಿಯಾಗಿದೆ. ಇದಕ್ಕೂ ಮೊದಲು ಭಾರತ ಮತ್ತು ಪಾಕಿಸ್ತಾನ ತಕ್ಷಣದ ಕದನ ವಿರಾಮವನ್ನು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದರು.
ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯ ನಂತರ ಭಾರತ ಮತ್ತು ಪಾಕಿಸ್ತಾನಗಳು ‘ಸಂಪೂರ್ಣ ಮತ್ತು ತಕ್ಷಣದ’ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ.














