ಮನೆ ರಾಜ್ಯ ರಾಜ್ಯಕ್ಕೆ ಆಗಮಿಸಿದ ಅಮಿತ್‌ ಶಾ: ನಾಯಕತ್ವ ಬದಲಾವಣೆ ಕುರಿತು ಹೆಚ್ಚಿದ ಕುತೂಹಲ

ರಾಜ್ಯಕ್ಕೆ ಆಗಮಿಸಿದ ಅಮಿತ್‌ ಶಾ: ನಾಯಕತ್ವ ಬದಲಾವಣೆ ಕುರಿತು ಹೆಚ್ಚಿದ ಕುತೂಹಲ

0

ಬೆಂಗಳೂರು (Bengaluru)- ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ (Amit Shah) ಅವರು ರಾಜ್ಯಕ್ಕೆ ಆಗಮಿಸಿದ್ದಾರೆ.

ದೆಹಲಿಯಿಂದ ವಿಶೇಷ ವಿಮಾನ ಮೂಲಕ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‌ (Arun Singh), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರು ಆತ್ಮೀಯವಾಗಿ ಸ್ವಾಗತಿಸಿದರು.

ರಾಜ್ಯ ರಾಜಕೀಯಲ್ಲಿ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಗಾಳಿ ಜೋರಾಗಿ ಬೀಸುತ್ತಿರುವ ನಡುವಲ್ಲೇ ಅಮಿತ್‌ ಶಾ ಅವರು ರಾಜ್ಯಕ್ಕೆ ಆಗಮಿಸಿರುವುದು ಎಲ್ಲರಲ್ಲೂ ಕುತೂಹಲವನ್ನುಂಟು ಮಾಡಿದೆ.

ಇಂದು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಿರುವ ಅಮಿತ್ ಶಾ ಅವರು ಬಸವ ಜಯಂತಿ ನಿಮಿತ್ತ ಅಣ್ಣ ಬಸವಣ್ಣರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.

ನಂತರ ನೃಪತುಂಗ ವಿಶ್ವವಿದ್ಯಾಲಯದ ನೂತನ ಶೈಕ್ಷಣಿಕ ಕಟ್ಟಡವನ್ನು ಉದ್ಘಾಟಿಸುವ ಮೂಲಕ ವಿವಿಗೆ ಅಧಿಕೃತವಾಗಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇದೇ ವೇಳೆ ಬಳ್ಳಾರಿಯ ವಿಧಿವಿಜ್ಞಾನ ಪ್ರಯೋಗಾಲಯವನ್ನು ವರ್ಚ್ಯುಯಲ್ ಆಗಿ ಉದ್ಘಾಟಿಸಲಿದ್ದಾರೆ.

ಇದರ ಜೊತೆಗೆ ಇ ಬೀಟ್ ಅಪ್ಲಿಕೇಷನ್ ಲೋಕಾರ್ಪಣೆ ಮಾಡಲಿದ್ದಾರೆ. ಮಧ್ಯಾಹ್ನ 12 ರ ನಂತರ ಸಾತನೂರು ಗ್ರಾಮಕ್ಕೆ ತೆರಳಿ ನ್ಯಾಟ್ ಗ್ರಿಡ್ ಕ್ಯಾಂಪಸ್ ಉದ್ಘಾಟಿಸಲಿದ್ದಾರೆ. ಬಳಿಕ ಮುಖ್ಯಮಂತ್ರಿ ಬೊಮ್ಮಾಯಿಯವರ ನಿವಾಸದಲ್ಲಿ ಗೌರವಾರ್ಥವಾಗಿ ಆಯೋಜಿಸಲಾಗಿರುವ ಭೋಜನ ಕೂಟದಲ್ಲಿ ಅಮಿತ್ ಶಾ ಭಾಗಿಯಾಲಿದ್ದಾರೆ.

ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ ಮುಖ್ಯಮಂತ್ರಿಗಳ ನಿವಾಸದಲ್ಲಿ ಈ ಭೋಜನ ಕೂಟ ನಡೆಯಲಿದ್ದು, 40ಕ್ಕೂ ಹೆಚ್ಚು ಬಗೆಯ ಖಾದ್ಯಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ಮುಖಂಡರನ್ನು ತಣಿಸಲಿವೆ.

ಪಂಜಾಬಿ, ಗುಜರಾತಿ ಹಾಗೂ ದಕ್ಷಿಣ ಭಾರತೀಯ ಶೈಲಿಯ ಭೋಜನ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುಮಾರು 350ರಿಂದ 400 ಮಂದಿ ಭೋಜನ ಸ್ವೀಕರಿಸುವ ನಿರೀಕ್ಷೆಗಳಿವೆ ಎಂದು ಹೇಳಲಾಗುತ್ತಿದೆ.

ಭೋಜನ ಕೂಟದ ಬಳಿಕ ಮಧ್ಯಾಹ್ನ 2.30ರ ಸುಮಾರಿಗೆ ರಾಜ್ಯ ಬಿಜೆಪಿ ಪದಾಧಿಕಾರಿಗಳು, ಕೋರ್ ಸಮಿತಿ ಮತ್ತು ಮೋರ್ಚಾ ಅಧ್ಯಕ್ಷರ ಜೊತೆ ಅಮಿತ್ ಶಾ ಸಭೆ ನಡೆಸಲಿದ್ದಾರೆ. ವಿಶೇಷವೆಂದರೆ ಈ ಸಭೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗಮಿಸಲಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿಯ ಅಧಿಕೃತ ಕಾರ್ಯಕ್ರಮವೊಂದರಲ್ಲಿ ಈಶ್ವರಪ್ಪ ಕಾಣಿಸಿಕೊಳ್ಳುತ್ತಿದ್ದಾರೆ.

ಸಭೆ ಬಳಿಕ ಸಂಜೆ 5.30ರ ವೇಳೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರವ ಖೇಲೋ ಇಂಡಿಯಾ ವಿಶ್ವವಿದ್ಯಾಲಯಗಳ ಗೇಮ್ಸ್ 2021 ಸಮಾರೋಪ ಸಮಾರಂಭದಲ್ಲಿ ಅಮಿತ್ ಶಾ ಆಗಮಿಸುತ್ತಿದ್ದಾರೆ.

ಕಾರ್ಯಕ್ರಮಗಳ ನೆಪದಲ್ಲಿ ರಾಜ್ಯಕ್ಕೆ ಆಗಮಿಸಿರುವ ಅಮಿತ್ ಶಾ ಅವರು, ಈ ವೇಳೆ ಸಚಿವರು ತಮ್ಮ ಕ್ಷೇತ್ರದಲ್ಲಿ ಜನ ಪರ ಕೆಲಸ, ಭ್ರಷ್ಟ ರಹಿತ ಆಡಳಿತ, ಪಕ್ಷದ ವರ್ಚಸ್ಸು ಹೆಚ್ಚಿಸುವ ಕಾರ್ಯಕ್ರಮ ಸೇರಿದಂತೆ ಹಲವು ಮಾನದಂಡ ಇಟ್ಟುಕೊಂಡು ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಮಾನದಂಡದಲ್ಲಿ ಉತ್ತಿರ್ಣರಾದ ಶಾಸಕರಿಗೆ ಸಚಿವ ಸ್ಥಾನ ಒಲಿದು ಬರಲಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು, ಮುಂದಿನ ಚುನಾವಣೆಯ ಅಭ್ಯರ್ಥಿ ಆಯ್ಕೆ ಹಾಗೂ ವಂಶಾಡಳಿತ ರಾಜಕಾರಣದ ಕುರಿತಂತೆ ನೀಡಿದ್ದ ಹೇಳಿಕೆಯೊಂದು ರಾಜ್ಯ ಬಿಜೆಪಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ದೆಹಲಿ, ಗುಜರಾತ್‌ ನಗರಪಾಲಿಕೆ ಚುನಾ​ವ​ಣೆ​ಯಲ್ಲಿ ಬಿಜೆಪಿ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ. ಹಾಲಿ ಶಾಸಕರು, ಕುಟುಂಬಸ್ಥರನ್ನು ಹೊರಗಿಟ್ಟು ಚುನಾವಣೆ ಎದುರಿಸಿದ್ದೇ​ವೆ. ಹೊಸ ಮುಖಗಳಿಗೆ ಮಣೆ ಹಾಕಿದ್ದೇ ಬಿಜೆಪಿ ಅಧಿಕಾರಕ್ಕೇರಲು ಕಾರಣವಾಗಿ​ದೆ. ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹಾಲಿ ಸದಸ್ಯರಿಗೇ ಟಿಕೆಟ್‌ ನೀಡಲಿಲ್ಲ. ಗುಜರಾತ್‌ ಪಾಲಿಕೆ ಚುನಾವಣೆಗಳಲ್ಲಿ ಎರಡು ಬಾರಿ ಗೆದ್ದಿರುವವರನ್ನೂ ನಿವೃತ್ತಿ ಮಾಡಿದ್ದೇವೆ. ಹೊಸ ಕಾರ್ಯಕರ್ತರಿಗೆ ಟಿಕೆಟ್‌ ಕೊಟ್ಟು ಅಧಿಕಾರಕ್ಕೇರಿದ್ದೇವೆ. ಬಿಜೆಪಿಯಲ್ಲಿ ಮಾತ್ರ ಇಂಥ ಪ್ರಯೋಗಗಳು ನಡೆಯುತ್ತವೆ ಗುಜ​ರಾ​ತ್‌​ನಲ್ಲಿ ಮುಖ್ಯ​ಮಂತ್ರಿ ಸೇರಿ ಇಡೀ ಕ್ಯಾಬಿ​ನೆಟ್‌ ಅನ್ನೇ ಪುನರ್‌ ರಚಿ​ಸಿ​ದ್ದೆವು ಎಂದು ಹೇಳಿದ್ದರು.

ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ, ಮುಂಬರುವ ಚುನಾವಣೆದೆ ಸಂಘಟನಾತ್ಮಕ ಸಿದ್ಧತೆ ಸೇರಿದಂತೆ ಬಿಜೆಪಿಯಲ್ಲಿ ಸಾಕಷ್ಟು ಸಿದ್ಧತೆ ನಡೆಯುತ್ತಿರುವಾಗಲೇ ಸಂತೋಷ್ ಅವರ ಹೇಳಿಕೆ ಎಲ್ಲಿಲ್ಲದ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಇದೀಗ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಕುರಿತು ಸ್ಪಷ್ಟ ಚಿತ್ರಣಗಳು ಲಭ್ಯವಾಗಲಿವೆ ಎಂದು ಹೇಳಲಾಗುತ್ತಿದೆ.