ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಮಂಗಳೂರಿಗೆ ಭೇಟಿ ನೀಡುತ್ತಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಅಡಿಕೆ ವಹಿವಾಟು ನಡೆಸುವ ಕ್ಯಾಂಪ್ಕೊ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಫೆ.11ರಂದು ಬರುವ ಅಮಿತ್ ಶಾ, ಅಲ್ಲಿಂದ ನೇರವಾಗಿ ಸಂಜೆ 5.20ಕ್ಕೆ ಮಂಗಳೂರಿಗೆ ಬರಲಿದ್ದಾರೆ.
ನಗರದ ಹೊರವಲಯದ ಕೆಂಜಾರಿನಲ್ಲಿ ನಡೆಯುವ ವಿಶೇಷ ಸಭೆಯಲ್ಲಿ ಕೆಲಕಾಲ ಮಾತನಾಡಿ, ಅವರು ನಂತರ ಶ್ರೀದೇವಿ ಕಾಲೇಜಿನಲ್ಲಿ ನಡೆಯುವ ‘ಮಂಗಳೂರು, ಶಿವಮೊಗ್ಗ ವಿಭಾಗಗಳ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಬಿಜೆಪಿ ಭದ್ರ ನೆಲೆಯಾಗಿರುವ ಕರಾವಳಿಯಲ್ಲಿ ಇತ್ತೀಚೆಗೆ ನಡೆದಿರುವ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ನಂತರ ಕರಾವಳಿಯಲ್ಲಿನ ರಾಜಕೀಯ ಬೆಳವಣಿಗೆಗಳು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಮೇಲಿನ ಬೇಸರ, ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆಯ ಮಾನದಂಡ ಇಂತಹ ಅನೇಕ ಸಂಗತಿಗಳು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಗಳು ಇವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕೋರ್ ಕಮಿಟಿ ಸಭೆಯಲ್ಲಿ 118 ಜನರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಎಂ. ತಿಳಿಸಿದ್ದಾರೆ.