ಬೀದರ್: ಸಂವಿಧಾನದ ಮೂಲಕ ವಂಚಿತರಿಗೆ, ಶೋಷಿತರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ದೇವರಿಗೆ ಸರಿಸಮಾನರಾಗಿದ್ದು, ಅವರ ಜಪ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಬೀದರ್ ಯುವ ಸಂಸದ ಸಾಗರ್ ಈ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಶತ ಶತಮಾನಗಳಿಂದ ಅಸ್ಪೃಶ್ಯತೆಯ ನೋವುಂಡು, ಸಾಮಾಜಿಕ ನ್ಯಾಯ, ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತಿತರೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ, ಶೋಷಿತರಾಗಿ ದೌರ್ಜನ್ಯಕ್ಕೆ ಒಳಗಾಗಿ ಚಾತುರ್ವರ್ಣಾಶ್ರಮ ವ್ಯವಸ್ಥೆಯಲ್ಲಿ ನೊಂದು ಬೆಂದವರಿಗೆ ಸಾಮಾಜಿಕ ನ್ಯಾಯ ಕೊಟ್ಟ ಪುಣ್ಯ ಪುರುಷನಿಗೆ ಅವಮಾನ ಮಾಡಿರುವ ಗೃಹ ಸಚಿವ ಅಮಿತ್ ಶಾ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಮಾತನಾಡುವ ವೇಳೆ “ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಅನ್ನೋದು ಈಗ ಕೆಲವರಿ ಫ್ಯಾಶನ್ ಆಗಿದೆ. ಇಷ್ಟು ಬಾರಿ ದೇವರ ನಾಮ ಜಪಿಸಿದ್ದರೆ ಏಳು ಜನ್ಮಗಳ ವರೆಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ’’ ಎಂದು ಹೇಳುವ ಮೂಲಕ ಅಂಬೇಡ್ಕರ್ ಮತ್ತು ಅವರ ಎಲ್ಲ ಅಭಿಮಾನಿಗಳಿಗೆ ನೋವುಂಟು ಮಾಡಿದ್ದಾರೆ. ಈ ಮಾತುಗಳು ಶಾ ಮನದಾಳದ ಮಾತುಗಳಾಗಿದ್ದು, ಭಾವೋದ್ರೇಕದಲ್ಲಿ ಹೊರಹಾಕಿದ್ದಾರೆ. ಇದು ಬಿಜೆಪಿ ಮನೋಸ್ಥಿತಿಯ ಪ್ರತಿಬಿಂಬವಾಗಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಮತ್ತು ಅದರ ನಾಯಕರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಮನುವಾದಿ ನೀತಿ ಅನುಸರಿಸುವ ಅವರು ದಮನಿತರನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ. ಅಮಿತ್ ಶಾ ಅವರ ಈ ಮಾತುಗಳು ಬಿಜೆಪಿ ಭಾವನೆಗೆ ಕೈಗನ್ನಡಿಯಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ಸಂವಿಧಾನವು ಸಮಾನತೆ, ಸ್ವಾತಂತ್ರ್ಯ, ಮತ್ತು ಸಹಬಾಳ್ವೆಗೆ ಒತ್ತು ನೀಡುತ್ತದೆ. ಆದರೆ, ಬಿಜೆಪಿ ಸರ್ಕಾರದ ಧೋರಣೆಗಳು ಈ ತತ್ವಗಳಿಗೆ ತದ್ವಿರುದ್ಧವಾಗಿದೆ. ಹೀಗಾಗಿಯೇ ಬಿಜೆಪಿ ನಾಯಕರು ಪದೇ ಪದೇ ಸಂವಿಧಾನ ಬದಲಿಸುವುದು ಮಾತನಾಡುವುದು ಎಂದು ಸಾಗರ್ ಖಂಡ್ರೆ ಹೇಳಿದ್ದಾರೆ.
ಅಮಿತ್ ಶಾ ರಾಜೀನಾಮೆ ಮತ್ತು ಕ್ಷಮೆಯಾಚನೆಗೆ ಆಗ್ರಹ:-
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಅಮಿತ್ ಶಾ ಅವರು ತಕ್ಷಣವೇ ಗೃಹ ಸಚಿವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರ ಅಸಭ್ಯ ಹೇಳಿಕೆಗಾಗಿ ದೇಶದ ಮುಂದೆ ಅವರು ಬಹಿರಂಗವಾಗಿ ಬೇಷರತ್ ಕ್ಷಮೆಯಾಚಿಸಬೇಕೆಂದು ಸಾಗರ ಖಂಡ್ರೆ ಒತ್ತಾಯಿಸಿದ್ದಾರೆ.
ಸಂವಿಧಾನಶಿಲ್ಪಿಗೆ ನೇರವಾಗಿ ಮತ್ತು ಆ ಮೂಲಕ ಸಂವಿಧಾನಕ್ಕೆ ಪರೋಕ್ಷವಾಗಿ ಘೋರ ಅವಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ಮಹಾಮಹಿಮ ರಾಷ್ಟ್ರಪತಿಯವರು ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.