ಮಂಡ್ಯ(Mandya): ಅಮಿತ್ ಶಾ ಅವರ ವ್ಯಕ್ತಿತ್ವ ಬಹಳ ದೊಡ್ಡದು ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಮೆಗಾ ಡೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು, ಸಚಿವರು ಭಾಗವಹಿಸಿದರು. ಈ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಬಂದಿದ್ದಾರೆ. ಇದರಲ್ಲಿ ರಾಜಕೀಯ ಬೆರೆಸುವ ಅಗತ್ಯವಿಲ್ಲ. ವಿವಿಧ ಸಚಿವರು, ಸ್ವಾಮಿಗಳು, ಕೇಂದ್ರ ಸಚಿವರು ಸೇರಿದಂತೆ ಅನೇಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನಾನೂ ಭಾಗವಹಿಸಿದ್ದೇನೆ. ರಾಜಕೀಯ ಮಾಡಲು ನಾನಿಲ್ಲ ಬಂದಿಲ್ಲ ಎಂದು ದೇವೇಗೌಡ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಮೋದಿ ನಿಧನರಾಗಿರುವುದಕ್ಕೆ ಮಾಜಿ ಪ್ರಧಾನಿ ಸಂತಾಪ ಸೂಚಿಸಿದರು.
ದೇಶದ ಗೃಹ ಮಂತ್ರಿಗಳು ಸಹಕಾರ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಗಮನ ಹರಿಸಿದ್ದಾರೆ. ಹಲವು ಇಲಾಖೆಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಮತ್ತು ನಷ್ಟದ ಕಾರಣಗಳನ್ನು ತಿಳಿದುಕೊಳ್ಳುವ ಸಲುವಾಗಿ ನಮ್ಮ ಜೊತೆ ಇದ್ದಾರೆ. ಇದರಲ್ಲಿ ರಾಜಕೀಯ ಬೇಡ ಎಂದು ಹೇಳಿದರು.
ನಾನು ಪ್ರಧಾನಿಯಾಗಿದ್ದಾಗ ರಾಜ್ಯದಲ್ಲಿ 12 ಸೊಸೈಟಿಗಳು ಇದ್ದವು. ಇವುಗಳನ್ನು ಎಚ್.ಡಿ. ರೇವಣ್ಣ ಒಂದುಗೂಡಿಸಿದರು. ಗುಜರಾತ್’ನಲ್ಲಿ ಕುರಿಯನ್ ಅವರು ಕ್ಷೀರ ಕ್ರಾಂತಿ ಮಾಡಿರುವಂತೆ ನಮ್ಮ ರಾಜ್ಯದಲ್ಲಿಯೂ ಏನಾದರೂ ಮಾಡಬೇಕು ಎಂದು ಅವರು ನನ್ನ ಬಳಿ ಹೇಳಿದರು.
ಈ ವಿಚಾರವಾಗಿ ಅಮಿತ್ ಶಾ ಅವರಲ್ಲಿ ಮನವಿ ಮಾಡಿದ್ದೆ. ಅವರು ನನ್ನ ಮನವಿಯನ್ನು ಪುರಸ್ಕರಿಸಿದರು. ಅದನ್ನು ಸಾಕಾರಗೊಳಿಸಿದರು. ಈ ವಿಚಾರವಾಗಿ ಕೇಂದ್ರ ಗೃಹ ಸಚಿವರಿಗೆ ನಾನು ಆಭಾರಿ ಎಂದು ದೇವೇಗೌಡ ಹೇಳಿದರು.