ನವದೆಹಲಿ: ಭಾರತದ ಅತಿದೊಡ್ಡ ಏರ್ಲೈನ್ಸ್ ಸಂಸ್ಥೆಯಾದ ಇಂಡಿಗೋದ ನಿರ್ದೇಶಕರಾಗಿ ಮಾಜಿ ನೀತಿ ಆಯೋಗ್ ಸಿಇಒ ಅಮಿತಾಭ್ ಕಾಂತ್ ಅವರನ್ನು ನೇಮಕ ಮಾಡಲಾಗಿದೆ. ಭಾರತದ ಜಿ20 ಶೆರ್ಪಾ ಆಗಿಯೂ ಕಾರ್ಯನಿರ್ವಹಿಸಿದ್ದ ಅಮಿತಾಭ್ ಕಾಂತ್ ಅವರನ್ನು ತನ್ನ ಮಂಡಳಿಯ ನಿರ್ದೇಶಕರಾಗಿ ನೇಮಿಸಿರುವ ಸಂಗತಿಯನ್ನು ಇಂಡಿಗೋ ಸಂಸ್ಥೆ ಪ್ರಕಟಿಸಿದೆ. ಆದರೆ, ಷೇರುದಾರರ ಅನುಮೋದನೆ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಅನುಮೋದನೆ ಸಿಕ್ಕ ಬಳಿಕ ಅಮಿತಾಭ್ ಕಾಂತ್ ಅವರ ನಿರ್ದೇಶಕ ಸ್ಥಾನ ಊರ್ಜಿತವಾಗುತ್ತದೆ.
‘2025ರ ಜುಲೈ 3ರಂದು ನಡೆದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಅಮಿತಾಭ್ ಕಾಂತ್ ಅವರನ್ನು ನಿರ್ದೇಶಕರಾಗಿ ನೇಮಕ ಮಾಡಲು ಅನುಮೋದನೆ ಮಾಡಲಾಗಿದೆ. ಕೇಂದ್ರ ನಾಗರಿಕ ವಿಮಾನಯಾನದಿಂದ ಸೆಕ್ಯೂರಿಟಿ ಕ್ಲಿಯರೆನ್ಸ್ ದೊರೆತ ಬಳಿಕ ಅವರ ನಿರ್ದೇಶಕ ಸ್ಥಾನದ ಅಧಿಕಾರ ಚಾಲನೆಗೆ ಬರುತ್ತದೆ. ಕಂಪನಿಯ ಷೇರುದಾರರ ಅನುಮೋದನೆಯೂ ಅಗತ್ಯ ಇದೆ’ ಎಂದು ಇಂಟರ್ ಗ್ಲೋಬ್ ಏವಿಯೇಶನ್ ಸಂಸ್ಥೆ ಎನ್ನ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ.














