ಉಪಯುಕ್ತ ಭಾಗಗಳು
ಅಮೃತಬಳ್ಳಿಯ ಕಾಂಡ, ಎಲೆ,ಬೇರು ಔಷಧೀಯ ಗುಣ ಹೊಂದಿದೆ.
ಕೊಯ್ಲು ಮತ್ತು ಇಳುವರಿ :
ನಾಟಿ ಮಾಡಿದ ಮೂರು ನಾಲ್ಕು ತಿಂಗಳನಂತರ ಎಲೆಗಳು ಕೊಯ್ಲಿಗೆ ಬರುತ್ತವೆ. ನಂತರ ಪ್ರತಿ ತಿಂಗಳಿಗೊಮ್ಮೆ ಬಲಿತ ಎಲೆಗಳನ್ನು ಕೊಯ್ಲು ಮಾಡಿ ಉಪಯೋಗಿಸಬಹುದು. ಪ್ರತಿ ಗಿಡದಿಂದ ವರ್ಷದಲ್ಲಿ ಒಂದು ಕೆ.ಜಿ ಒಣಗಿದ ಎಲೆಗಳನ್ನು ಮತ್ತು 500 ಗ್ರಾಂ ಕಾಂಡದ ಇಳುವರಿ ದೊರೆಯುತ್ತದೆ.
ಸಸ್ಯ ಹಂಚಿಕೆ:
ಭಾರತ ಮತ್ತು ಶ್ರೀಲಂಕಾದ ಉಷ್ಣಪ್ರದೇಶದಲ್ಲಿ ನೈಸರ್ಗಿಕವಾಗಿ ಹರಡುವುದು ಕಂಡುಬರುತ್ತದೆ.ನಮ್ಮ ರಾಜ್ಯದಲ್ಲಿ ಅಮೃತ ಬಳ್ಳಿಯು ಸಾಮಾನ್ಯವಾಗಿ ಬೆಂಗಳೂರು, ಬೆಳಗಾಂ, ಬಿಜಾಪುರ, ಚಿಕ್ಕಮಂಗಳೂರು, ಕೊಡಗು, ಕೋಲಾರ,ಮೈಸೂರು ಮತ್ತು ಶಿವಮೊಗ್ಗದಲ್ಲಿ ಬೆಳೆಯುವುದನ್ನು ಕಾಣಬಹುದು.
ಅವಗುಣ ಮತ್ತು ಮಣ್ಣು :
ಸಾಮಾನ್ಯವಾಗಿ ಎಲ್ಲಾ ಪ್ರದೇಶಗಳಲ್ಲಿ ಎಲ್ಲ ಋತುಗಳಲ್ಲಿ ಬೆಳೆಸಬಹುದು. ಅಮೃತ ಬಳ್ಳಿಗೆ ಕಾಲಕಾಲಕ್ಕೆ ನೀರು ಮತ್ತು ಕೊಟ್ಟಿಗೆ ಗೊಬ್ಬರ ಅವಶ್ಯಕ.ಎಲ್ಲಾ ರೀತಿಯ ಮಣ್ಣುಗಳಲ್ಲೂ ಬೆಳೆಯುವ ಈ ಬಳ್ಳಿಯು ಹೆಚ್ಚಿನ ಸಾವಯವ ಅಂಶವುಳ್ಳ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ.
ಸಸ್ಯಾಭಿವೃದ್ಧಿ:
ಗಂಡು ಮತ್ತು ಹೆಣ್ಣು ಗಿಡಗಳು ಬೇರೆ ಬೇರೆ ಬೆಳೆಯುವುದರಿಂದ ಬೀಜದಿಂದ ಪಡೆದ ಸಸಿಗಳು ಹೆಚ್ಚಿನ ಭಿನ್ನತೆಯನ್ನು ತೋರುತ್ತವೆ. ಶೇಕಡಾ 10ಕ್ಕಿಂತಲೂ ಕಡಿಮೆ ಮೊಳಕೆ ನೀಡುವುದರಿಂದ ಬೀಜದಿಂದ ಸಸ್ಯ ವೃದ್ಧಿಪಡಿಸುವುದು ಲಾಭದಾಯಕವಲ್ಲ.
ಕಿರು ಬೆರಳಿನ ಗಾತ್ರದ ಆರು ಅಂಗುಲದಷ್ಟು ಉದ್ದದ ಅಮೃತಬಳ್ಳಿಯ ತುಂಡುಗಳನ್ನು ಸಾಮಾನ್ಯವಾಗಿ ಕುಂಡಗಳ ಮಿಶ್ರಣವನ್ನು ತುಂಬಿದ ಪಾಲಿಥೀನ್ ಚೀಲದಲ್ಲಿ ನಾಟಿ ಮಾಡಿದಲ್ಲಿ ಅವು ಚೆನ್ನಾಗಿ ಬೇರು ಬಿಟ್ಟು ಬೆಳೆಯುತ್ತವೆ.
ನಾಟಿ ಮತ್ತು ಅಂತರ ಬೇಸಾಯ :
ಬೇರು ಬಿಟ್ಟ ಕಾಂಡದ ತುಂಡುಗಳನ್ನು ಒಂದು ಮೀ ಅಂತರದಲ್ಲಿ ನೆಡಬೇಕು.ನಾಟಿ ಮಾಡಿದ ನಂತರದ ಮೊದಲ ವಾರದಲ್ಲಿ ಪ್ರತಿದಿನವೂ ನೀರು ಕೊಟ್ಟಲ್ಲಿ ಬಳ್ಳಿಯು ಸ್ಥಿರವಾಗಿ ಹೊಂದಿಕೊಳ್ಳಲು ನೆರವಾಗುತ್ತದೆ. ನಂತರದ ದಿನಗಳಲ್ಲಿ ಐದು-ಆರು ದಿನಕೊಮ್ಮೆ ನೀರು ಕಟ್ಟಿದರೆ ಸಾಕು.ಬಳ್ಳಿಯು ಮೇಲು ಹಬ್ಬಲು ಸೂಕ್ತ ಆಸರೆಯನ್ನು ಒದಗಿಸಬೇಕು.
ಗೊಬ್ಬರ :
ಪ್ರತಿ ಗಿಡಕ್ಕೆ ಐದು ಕೆಜಿ ಕೊಟ್ಟಿಗೆ ಗೊಬ್ಬರವನ್ನು ಹಾಕಬೇಕು.
ಕೀಟ ಮತ್ತು ರೋಗಗಳು :
ಸಾಮಾನ್ಯವಾಗಿ ಕಂಡುಬರುವ ಬಾಧೆಯೆಂದರೆ ಬೂಜುರೋಗ. ಇದು ಕೀಟಕಿಗಳಿಂದ ಎಲೆಗಳ ಮೇಲೆ ವಿಸರ್ಜಿತವಾದ ಅಂಟಿನ ಮೇಲೆ ಕಪ್ಪನೆಯ ಶಿಲೀಂಧ್ರ ಬೆಳೆದು ಆ ಬಳ್ಳಿಯ ಆಹಾರ ಉತ್ಪಾದನಾ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.ಕ್ರಮೇಣ ಎಲೆಗಳು ಒಣಗಿ ಉದುರುತ್ತವೆ.
ಇದನ್ನು ಹತೋಟಿಗೆ ತರಲು, ಅಕ್ಕಿ ಹಿಟ್ಟನ್ನು ಕುದಿಯುವ ನೀರಿನಲ್ಲಿ ಬೆರೆಸಿ ದ್ರಾವಣ ಮಾಡಿಕೊಂಡು,ಅರಿದ ನಂತರ ಗಿಡದ ಮೇಲೆ ಸಿಂಪಡಿಬೇಕು. ಅಕ್ಕಿ ಹಿಟ್ಟು ಕಪ್ಪನೆಯ ಶಿಲೀಂಧ್ರದೊಂದಿಗೆ ಅಂಟಿಕೊಂಡು, ಒಂದೆರಡು ದಿನಗಳ ನಂತರ ಒಣಗಿ ಅದರ ಜೊತೆಗೆ ಉದುರುತ್ತದೆ.
ರಾಸಾಯನಿಕ ಘಟಕಗಳು :
ಬೆರ್ಬೆರಿನ್, ಪಿಷ್ಟ,ಮತ್ತು ಕಹಿ ದ್ರವ್ಯ ಇರುತ್ತದೆ. ಐಸೋಕೊಲಂಬಿನ್, ಟೆಟ್ರಾಹೈಡ್ರೋಪಾಲ್ನಾಟಿನ್, ಮಾಗ್ನೊಫ್ಲಾರಿನ್, ಪಾಲ್ಮಟಿನ್, ಟಿನೋಸ್ಪೊರಿನ್, ಟನೋಸ್ಪೊರೈಡ್ ಕಾರ್ಡಿ ಫೊಲೈಡ್ಗಳಿವೆ.