ಬೆಂಗಳೂರು: ಯುವತಿಗಾಗಿ ಬಾಲ್ಯ ಸ್ನೇಹಿತನ ಮೇಲೆ ಹಾಲೋಬ್ರಿಕ್ಸ್ ಎತ್ತಿಹಾಕಿ ಹತ್ಯೆಗೈದಿದ್ದ ಯುವಕನ್ನು ಸಂಜಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉಡುಪಿಯ ಕಿದಿಯೂರು ಮೂಲದ ದಿವೇಶ್ ಹೆಗಡೆ (24) ಬಂಧಿತ. ಆರೋಪಿ ಸೆ.21ರಂದು ಮುಂಜಾನೆ ಬಾಲ್ಯ ಸ್ನೇಹಿತ ವರುಣ್ ಕೋಟ್ಯಾನ್ (24)ನನ್ನು ಹತ್ಯೆಗೈದು ಪರಾರಿಯಾಗಿದ್ದ. ಈ ಸಂಬಂಧ ಆರೋಪಿಯನ್ನು ಸಂಜಯ ನಗರದ ಸೌಂದರ್ಯ ಪಾರ್ಕ್ ಬಳಿ ಬಂಧಿಸಲಾಗಿದೆ. ಆರೋಪಿ ಪ್ರೀತಿಸು ತ್ತಿದ್ದ ಯುವತಿ ವರುಣ್ ಕೋಟ್ಯಾನ್ ಜತೆ ಹೆಚ್ಚು ಓಡಾಡುತ್ತಿದ್ದರಿಂದ ಕೋಪಗೊಂಡು ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
ಉಡುಪಿ ಮೂಲದ ವರುಣ್ ಮತ್ತು ದಿವೇಶ್ ಹಾಗೂ ಯುವತಿ ಶಾಲಾ ಸ್ನೇಹಿತರಾಗಿದ್ದು, ಬೆಂಗಳೂರಿಗೆ ಬಂದು ಗೆದ್ದಲಹಳ್ಳಿಯಲ್ಲಿರುವ ಬಾಡಿಗೆ ಮನೆಯಲ್ಲಿ ಮೂವರು ಒಂದು ವರ್ಷದಿಂದ ವಾಸವಾಗಿದ್ದರು. ಯುವತಿ ಹೋಟೆಲ್‌ವೊಂದರಲ್ಲಿ ಸ್ವಾಗತಕಾರಿಣಿಯಾಗಿದ್ದು, ದಿವೇಶ್, ಝೋಮೋಟೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ವರುಣ್, ಬಾಗಲೂರಿನಲ್ಲಿರುವ ಸಂಸ್ಥೆಯೊಂದರಲ್ಲಿ ಸೇಫ್ಟಿ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದ. ಕೆಲ ತಿಂಗಳ ಹಿಂದೆ ಯುವತಿ ಎಂ.ಜಿ.ರಸ್ತೆ ಸಮೀಪದಲ್ಲಿರುವ ಪಿಜಿಗೆ ಸ್ಥಳಾಂತರವಾಗಿದ್ದರು.
ಆರೋಪಿ ದಿವೇಶ್, 2 ತಿಂಗಳಿಂದ ಬಾಲ್ಯ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದ. ಆದರೆ, ಆಕೆ ಬಳಿ ಹೇಳಿಕೊಂಡಿರಲಿಲ್ಲ. ಆದರೆ, ವರುಣ್ ಕೋಟ್ಯಾನ್, ಆಕೆಯ ಜತೆ ಓಡಾಡುತ್ತಿದ್ದು, ತನ್ನ ಭಾವನೆಗಳನ್ನು ಪರೋಕ್ಷವಾಗಿ ಆಕೆಗೆ ತಿಳಿಸುತ್ತಿದ್ದ. ಅದನ್ನು ತಿಳಿದ ಆರೋಪಿ, ವರುಣ್ ಜತೆ ಜಗಳವಾಡಿದ್ದಾನೆ. ಅಲ್ಲದೆ, ಈಗಾಗಲೇ ನೀನು ಒಂದು ಯುವತಿಯನ್ನು ಪ್ರೀತಿಸುತ್ತಿದ್ದು, ಆದರೂ ತನ್ನ ಸ್ನೇಹಿತೆಯ ಜತೆ ತುಂಬಾ ಸಲುಗೆಯಿಂದ ಇರುತ್ತಿಯಾ ಎಂದು ಪ್ರಶ್ನಿಸಿದ್ದಾನೆ. ಆಗ ರೂಮ್‌ನಲ್ಲಿದ್ದ ಇತರೆ ಯುವಕರು ಇಬ್ಬರಿಗೂ ಸಮಾಧಾನ ಮಾಡಿದ್ದರು. ಸೆ.21ರಂದು ಇದೇ ವಿಷಯವಾಗಿ ವರುಣ್ ಜೊತೆಗೆ ದಿವೇಶ್ ಜಗಳ ತೆಗೆದು, ತಲೆ ಮೇಲೆ ಇಟ್ಟಿಗೆ ಎತ್ತಿಹಾಕಿ ಕೊಲೆಗೈದಿದ್ದನು.
ಇನ್ನು ಯುವತಿ ವಿಚಾರಣೆಯಲ್ಲಿ, ವರುಣ್ ಮತ್ತು ದಿವೇಶ್ ತನ್ನನ್ನು ಪ್ರೀತಿಸುತ್ತಿರುವ ವಿಚಾರ ಗೊತ್ತಿಲ್ಲ. ವರುಣ್ ತನ್ನೊಂದಿಗೆ ಹೆಚ್ಚು ಸಲುಗೆಯಿಂದ ಇದ್ದ. ದಿವೇಶ್, ಹೆಚ್ಚು ಮಾತನಾಡುತ್ತಿರಲಿಲ್ಲ. ಏನನ್ನು ಹೇಳಿಕೊಳ್ಳುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.