ಹಾಸನ ಜಿಲ್ಲಾ ಕೇಂದ್ರಕ್ಕೆ 43 ಕಿಲೋ ಮೀಟರ್ ದೂರದಲ್ಲಿರುವ ಊರು ಆನೆಕೆರೆ. ಚನ್ನರಾಯಪಟ್ಟಣಕ್ಕೆ ಹೋಗುವ ಮಾರ್ಗದಲ್ಲಿ ಹೆದ್ದಾರಿಯಿಂದ 5 ಕಿಲೋ ಮೀಟರ್ ದೂರದಲ್ಲಿರುವ ಈ ಊರಿನಲ್ಲಿ ಭವ್ಯವಾದ ಚನ್ನಕೇಶವಸ್ವಾಮಿ ದೇವಾಲಯವಿದೆ.
ಈ ಊರಿಗೆ ಆನೆ ಕೆರೆ ಎಂದು ಹೆಸರು ಬರಲು ಕಾರಣ ಊರಿನಲ್ಲಿರುವ ಎರಡು ದೊಡ್ಡ ಕೆರೆಗಳು. ಹಿಂದೊಮ್ಮೆ ಈ ಕೆರೆಗಳು ಆನೆಗಳ ಜಲಕ್ರೀಡೆಯ ತಾಣವಾಗಿದ್ದಿರಲೂ ಬಹುದೆಂದು ಊರ ಹಿರಿಯರು ಅಭಿಪ್ರಾಯಪಡುತ್ತಾರೆ.
ಈ ಊರಿನಲ್ಲಿರುವ ಸುಂದರ ದೇವಾಲಯ ಅರಸೀಕೆರೆ ತಾಲೂಕಿನಲ್ಲಿರುವ ಹುಲ್ಲೇಕೆರೆ ದೇವಾಲಯದ ಪ್ರತಿರೂಪದಂತಿದೆಯಂತೆ. ಈ ದೇವಾಲಯವನ್ನು ಕ್ರಿ.ಶ. 1119ರಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸದಿಂದ ತಿಳಿದುಬರುತ್ತದೆ.
ಹೊಯ್ಸಳರ ವಾಸ್ತು ವೈಭವಕ್ಕೆ ಸಾಕ್ಷಿಯಾಗಿರುವ ಈ ದೇವಾಲಯಕ್ಕೆ ವಿಶಾಲವಾದ ಪ್ರಾಕಾರವಿದ್ದು, ಮುಖಮಂಟಪ, ಸುಖನಾಸಿ, ಭುವನೇಶ್ವರಿ, ಗರ್ಭಗೃಹವನ್ನು ಒಳಗೊಂಡಿದೆ. ಹೊರಬಿತ್ತಿಗಳಲ್ಲಿ ಸೂಕ್ಷ್ಮ ಕೆತ್ತನೆಗಳು ಇಲ್ಲದಿದ್ದರೂ, ಅಲ್ಲಲ್ಲಿ ಇರುವ ಅರೆಕಂಬಗಳು ಮನೋಹರವಾಗಿವೆ. ಶಿಖರಗೋಪುರದಲ್ಲಿರುವ ಪ್ರಭಾವಳಿಯಂತೂ ನೋಡಲು ಅತಿ ಸುಂದರವಾಗಿದೆ. ಗೋಪುರದ ಮೇಲಿರುವ ಕಳಶ ಶಂಖದೋಪಾದಿಯಲ್ಲಿದೆ.
ಊರಿನಲ್ಲಿ ಶ್ರೀ ಗಂಗಾಧರೇಶ್ವರ ದೇವಾಲಯವೂ ಇದ್ದು, ಆನೆಕೆರೆ ಹರಿಹರ ಕ್ಷೇತ್ರವೆಂದೇ ಖ್ಯಾತವಾಗಿದೆ.
ಸಂಪರ್ಕ: ಉಪ ನಿರ್ದೇಶಕರು ಮತ್ತು ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ, ಹಾಸನ, ದೂರವಾಣಿ 08172-267345. ಅಥವಾ ಸಹಾಯಕ ನಿರ್ದೇಶಕರು, ಪ್ರದಾಶಿಕ ಪ್ರವಾಸೋದ್ಯಮ ಅಧಿಕಾರಿಗಳ ಕಾರ್ಯಾಲಯ, ಹಾಸನ. 08172-268862.